ADVERTISEMENT

`ವಿಮಾ ಕಾನೂನು ತಿದ್ದುಪಡಿ ಮಾಡಿದರೆ ಮುಷ್ಕರ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 9:20 IST
Last Updated 7 ಡಿಸೆಂಬರ್ 2012, 9:20 IST

ಉಡುಪಿ: ವಿಮಾ ಕಾನೂನು (ತಿದ್ದುಪಡಿ) ಮಸೂದೆ 2008 ಅನ್ನು ಅಖಿಲ ಭಾರತ ವಿಮಾ ನೌಕರರ ಸಂಘವು ವಿರೋಧಿಸುತ್ತದೆ. ಅಲ್ಲದೆ ರಾಜ್ಯಸಭೆಯಲ್ಲಿ ಸರ್ಕಾರ ಈ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದ ಮರು ದಿನ ಅಖಿಲ ಭಾರತ ವಿಮಾ ನೌಕರರ ಸಂಘದ (ಎಐಐಇಎ) ವತಿಯಿಂದ ದೇಶದಾದ್ಯಂತ ಮುಷ್ಕರ ನಡೆಸಲಾ ಗುತ್ತದೆ ಎಂದು ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಯು. ಗುರುದತ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಯನ್ನು ಮಂಡಿಸಿ ಅನುಮೋದನೆ ಪಡೆಯಲು ಮುಂದಾಗಿದೆ. ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಶೇ 26 ರಿಂದ 49ಕ್ಕೆ ಏರಿಸುವ ಹಾಗೂ ಸಾಮಾನ್ಯ ವಿಮಾ ಕ್ಷೇತ್ರದ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಲಿದೆ. ಇದಕ್ಕೆ  ಎಐಐಇಎ ವಿರೋಧವಿದೆ. ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸದೆ ಮಸೂದೆ ಮಂಡಿಸಿ ಒಪ್ಪಿಗೆ ಪಡೆದರೆ ಫೆಬ್ರುವರಿ 21 ಮತ್ತು 22ರಂದು ಅಖಿಲ ಭಾರತ ಮಟ್ಟದಲ್ಲಿ ಮುಷ್ಕರ ನಡೆಸಲಾಗುತ್ತದೆ ಎಂದರು.

ಭಾರತದಲ್ಲಿ ಜೀವ ವಿಮಾ ರಂಗದಲ್ಲಿ 23 ಹಾಗೂ ಸಾಮಾನ್ಯ ವಿಮಾ ಕ್ಷೇತ್ರದಲ್ಲಿ 18 ಖಾಸಗಿ ವಿಮಾ ಸಂಸ್ಥೆಗಳು ವಿದೇಶೀ ಸಹಭಾಗಿತ್ವದಲ್ಲಿ ವ್ಯವಹಾರ ನಡೆಸುತ್ತಿವೆ. ವಿಮಾ ರಂಗವನ್ನು ವಿಸ್ತಾರಗೊಳಿಸುವ ಮೂಲ ಉದ್ದೇಶವೂ ಇವುಗಳಿಂದ ಸಾಕಾರಗೊಂಡಿಲ್ಲ. ಈ ಸಂಸ್ಥೆಗಳು ಭಾರತದ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಬಂಡವಾಳ ತೊಡಗಿಸ ಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮೂಲ ಸೌಕರ್ಯದಲ್ಲಿ ಬಂಡವಾಳ ಹೂಡಿರುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ಅವರು ಹೇಳಿದರು.

ವಿದೇಶಿ ಬಂಡವಾಳಕ್ಕೆ ಹೆಚ್ಚಿನ ಅವಕಾಶ ನೀಡಿದರೆ ಬಂಡವಾಳ ಶಾಹಿಗಳಿಗೆ ಭಾರತದ ಆಂತರಿಕ ಉಳಿತಾಯದ ಮೇಲೆ ಹೆಚ್ಚಿನ ಹಿಡಿತ ಪಡೆಯಲು ಸಹಕಾರಿಯಾಗಲಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರದಿಂದ ಕೂಡಲೇ ಹಿಂದಕ್ಕೆ ಸರಿಯಬೇಕು. ಈ ಬಗ್ಗೆ ನಾವು ಜನ ಪ್ರತಿನಿಧಿಗಳಿಗೆ ಮನವಿ ನೀಡುತ್ತೇವೆ ಎಂದು ಗುರುದತ್ ಹೇಳಿದರು.

ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ್, ಉಪಾಧ್ಯಕ್ಷ ಡೆರಿಕ್ ರೆಬೆಲ್ಲೊ, ಜಂಟಿ ಕಾರ್ಯದರ್ಶಿ ಉಮೇಶ್, ಉಪ ಖಜಾಂಚಿ ಪ್ರಭಾಕರ್ ಕುಂದರ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.