ADVERTISEMENT

ವೇದ- ಪುನರ್ ಅನ್ವೇಷಣೆ ಆಗಲಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:45 IST
Last Updated 22 ಜನವರಿ 2011, 9:45 IST

 ಅಂತರರಾಷ್ಟ್ರೀಯ ಸಮ್ಮೇಳನ

ಉಡುಪಿ: ವೇದ ಅಧ್ಯಯನ 21ನೇ ಶತಮಾನದಲ್ಲಿಯೂ ಬಹಳ ಪ್ರಾಮುಖ್ಯವಾಗಿದ್ದು, ಅವುಗಳಲ್ಲಿ ಅಡಗಿರುವ ಗುಪ್ತಜ್ಞಾನನಿಧಿಯ ಪುನರ್‌ಅನ್ವೇಷಣೆ ಆಗಬೇಕು ಎಂದು ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಇಲ್ಲಿ ಹೇಳಿದರು.ಉಡುಪಿ ಪುತ್ತಿಗೆಮಠದ ವಾದಿರಾಜ ಸಂಶೊಧನಾ ಪ್ರತಿಷ್ಠಾನ, ಸುರತ್ಕಲ್‌ನ ಭಾರತೀಯ ವೈಜ್ಞಾನಿಕ ಪುರಾತತ್ವ ಸಂಸ್ಥೆ ಹಾಗೂ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಸಹಯೋಗದಲ್ಲಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ನಡೆದ ವೇದ ವಿದ್ಯೆಗಳ ವೈಜ್ಞಾನಿಕ ಅಧ್ಯಯನದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದೇಶಿಯರೂ ವೇದ ಅಧ್ಯಯನ ಮಾಡಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ನಾವು ಮರಳಿ ಅಧ್ಯಯನ ಮಾಡಬೇಕಿದೆ. ಆಧುನಿಕ ಮತ್ತು ಪ್ರಾಚೀನ ವೇದಗಳ ವಿಚಾರ ಸಮ್ಮಿಳಿತಗೊಂಡು ಚರ್ಚೆ ನಡೆಯಬೇಕು. ವೇದದಲ್ಲಿ ಅಡಗಿರುವ ಜ್ಞಾನಮೂಲ ತಿಳಿದು ಜನರಿಗೆ ತಿಳಿಸಿಕೊಡಬೇಕು ಎಂದರು.ಇಂದಿನ ಐಟಿ, ಬಿಟಿ ಹಾಗೂ ಜಾಗತೀಕರಣ ಸನ್ನಿವೇಶದಲ್ಲಿ ಮೂರನೇ ರಾಷ್ಟ್ರಗಳ ನಡುವೆ ಅಮೆರಿಕ ನಡೆಸುತ್ತಿರುವ ಪ್ರಹಾರಗಳ ಸಂಕಷ್ಟದಲ್ಲಿ ನಮ್ಮಲ್ಲಿನ ತಿಳಿವಳಿಕೆ ಮಟ್ಟ ಇನ್ನಷ್ಟು ವಿಸ್ತರಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಾದ ಅಗತ್ಯವಿದೆ. ಹೀಗಾಗಿ ನಮ್ಮ ಜ್ಞಾನನಿಧಿಯ ಪುನರ್‌ಅನ್ವೇಷಣೆ ಬಹಳ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ನಮ್ಮದೇ ಆದ ಜ್ಞಾನ ಸಂಪತ್ತನ್ನು ನಾವು ಅರಗಿಸಿಕೊಳ್ಳದ ಹೊರತೂ ವಿದೇಶದ ಜ್ಞಾನವನ್ನು ಎಷ್ಟು ಹೆಚ್ಚಿಸಿಕೊಂಡರೆ ಉಪಯೋಗವೇನು? ಮೊದಲು ನಮ್ಮನ್ನು ಅರಿತುಕೊಳ್ಳಬೇಕು.ಅದರ ಮೂಲಕ ಆಧುನಿಕ ಪ್ರಪಂಚ ಅರಿತು ಮುನ್ನಡೆಯುವ ಕೆಲಸವಾಗಬೇಕು ಎಂದರು.ಮುಂಬೈ ನಾಗರಹಳ್ಳಿ ಪ್ರಹ್ಲಾದಾಚಾರ್ಯ ಮಾತನಾಡಿ, ಬೇರೆ ಖಂಡಗಳಲ್ಲಿ ಯಾವ ಕಾಲದಲ್ಲಿ ಶಿಲಾಯುಗವಿತ್ತೋ ಆ ಸಮಯದಲ್ಲಿ ನಮ್ಮ ರಾಷ್ಟ್ರದಲ್ಲಿ ವೇದ ಉಪನಿಷದ್‌ಗಳ ಬಗ್ಗೆ ಮಹಾಮುನಿಗಳಿಂದ ಚರ್ಚೆ ನಡೆಯುತ್ತಿತ್ತು. ಆಧುನಿಕ ಮತ್ತು ಪ್ರಾಚೀನ ಹೀಗೆ ಎರಡೂ ಕಡೆಗಳಲ್ಲಿ ತುಲನಾತ್ಮಕ ಅಧ್ಯಯನವಾಗಬೇಕು, ಚರ್ಚೆಗಳಾಗಬೇಕು. ಆಗ ಮಾತ್ರ ವೇದಗಳ ಸಾರ ಅರ್ಥೈಸಿಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂತ್ರಾಲಯ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿ ಡಾ. ವಿ.ಆರ್.ಪಂಚಮುಖಿ ಮಾತನಾಡಿ, ವೇದಗಳಲ್ಲಿ ವೈಜ್ಞಾನಿಕ ವಿಚಾರಗಳು ಅಡಕವಾಗಿವೆ.ದುರದೃಷ್ಟವಶಾತ್ ಅವನ್ನು ಈವರೆಗೂ ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಪುರಾತನ ಪರಂಪರೆ ಬಗೆಗಿನ ನಿರ್ಲಕ್ಷ್ಯದಿಂದಾಗಿ ಅವು ಒಂದಿಷ್ಟು ಮರೆಯಾದಂತೆ ಕಾಣುತ್ತವೆ. ಅಲ್ಲದೇ ವೇದಗಳ ಅಧ್ಯಯನವೆಂದರೆ ಅವುಗಳನ್ನು ಬ್ರಾಹ್ಮಣರು ಮಾತ್ರವೇ ಮಾಡಬೇಕು, ಸಮಾಜದ ಒಂದು ವರ್ಗಕ್ಕೆ ಮಾತ್ರ ಸೇರಿದ್ದು ಎನ್ನುವ ತಪ್ಪು ಕಲ್ಪನೆಯಿದೆ.

ಆದರೆ ವೇದ ಇಡೀ ವಿಶ್ವದ ಜ್ಞಾನಮೂಲಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಅಪರೂಪದ ಶಕ್ತಿ ಹಾಗೂ ಜ್ಞಾನಕೇಂದ್ರ. ಹೀಗಾಗಿ ಈ ಕೇಂದ್ರದಲ್ಲಿ ಅಡಗಿರುವ ರಹಸ್ಯಗಳನ್ನು ಭೇದಿಸುವ ಕೆಲಸ ಆಗಬೇಕು ಎಂದರು.ಸಮ್ಮೇಳನ ಉದ್ಘಾಟಿಸಿದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ವೇದವೇ ಎಲ್ಲದಕ್ಕೂ ಮೂಲವಾಗಿದ್ದು, ವಿಜ್ಞಾನದ ಎಲ್ಲ ಸೂಕ್ಷ್ಮಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ವಿಷಯಗಳನ್ನು ಹೆಕ್ಕಿತೆಗೆದು ಅದನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದರು.

ಪುತ್ತಿಗೆ ಸುಗುಣೇಂದ್ರ ತೀರ್ಥರು ಮಾತನಾಡಿ, ವೇದವು ಧರ್ಮಕ್ಕೆ ಹೇಗೆ ಮೂಲವಾಗಿದೆಯೋ ಜ್ಞಾನಕ್ಕೆ ಕೂಡ ವೇದವೇ ಮೂಲ. ಅಲ್ಲದೇ ಪ್ರತಿಯೊಂದು ಜ್ಞಾನದ ಮೂಲವೂ ವೇದವೇ ಆಗಿದೆ. ಹೀಗಾಗಿ ವೇದದ ಹೊರತಾಗಿ ಯಾವುದೇ ಜ್ಞಾನವಿಲ್ಲ. ವೇದದ ವಿಭಿನ್ನ ದೃಷ್ಟಿಕೋನಗಳನ್ನು ವಿದ್ವಾಂಸರು ಪತ್ತೆಮಾಡಿ, ಅವುಗಳ ಬಗ್ಗ ಚರ್ಚಿಸಿ ವೇದದ ಬೇರೆ ಬೇರೆ ಆಯಾಮಗಳನ್ನು ದರ್ಶನ ಮಾಡಿಕೊಡುವ ಮೂಲಕ ಈ ಸಮ್ಮೇಳನದಲ್ಲಿ ‘ವೇದವೇ ಪ್ರತಿಯೊಂದಕ್ಕೂ ಜ್ಞಾನಮೂಲ’ ಎನ್ನುವುದನ್ನು ಘೋಷಣೆ ಮಾಡಬೇಕು ಎನ್ನುವ ಆಶಯವನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ತಿರುಪತಿ ಆರ್.ಎಸ್.ವಿದ್ಯಾಪೀಠದ ನಿವೃತ್ತ ಕುಲಪತಿ ಪ್ರೊ. ಡಿ.ಪ್ರಹ್ಲಾದಾಚಾರ್ಯ, ದೆಹಲಿಯ ಡಾ. ವಿಜಯಶಂಕರ ಶುಕ್ಲ, ಧರ್ಮದರ್ಶಿ ಡಾ. ವಿಜಯ ಬಲ್ಲಾಳ್, ಮಂತ್ರಾಲಯದ ರಾಜಾ ಸುಬ್ರಹ್ಮಣ್ಯ ಆಚಾರ್ ಇದ್ದರು. ಸಮ್ಮೇಳನದಲ್ಲಿ ವಿದ್ವಾಂಸರು ಪ್ರಬಂಧ ಮಂಡಿಸಲಿದ್ದು, 23ರ ಸಂಜೆ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.