ADVERTISEMENT

ಶವವಾಗಿ ತವರಿಗೆ ಮರಳಿದ ಜೆಸಿಂತಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 11:10 IST
Last Updated 17 ಡಿಸೆಂಬರ್ 2012, 11:10 IST

ಮಂಗಳೂರು: ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಶಿರ್ವ ಮೂಲದ ನಸ್ ಜೆಸಿಂತಾ ಸಲ್ಡಾನಾ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ 2.25ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ತರಲಾಯಿತು. ಮೃತದೇಹದೊಂದಿಗೆ ಜೆಸಿಂತಾ ಪತಿ ಬೆನೆಡಿಕ್ಟ್ ಬರ್ಬೋಜಾ, ಪುತ್ರ ಜುನಾಲ್, ಪುತ್ರಿ ಲಿಶಾ ಕೂಡಾ ಬಂದಿಳಿದರು. ಬೆನೆಡಿಕ್ಟ್ ಅವರ ಸಹೋದರಿ ಜಾನೆಟ್ ಫರ್ನಾಂಡಿಸ್, ಆಕೆಯ ಪತಿ ಸ್ಟೀಫನ್ ಲಾರೆನ್ಸ್ ಫರ್ನಾಂಡಿಸ್, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರನ್ನು ಬರಮಾಡಿಕೊಂಡರು.

ಅಲ್ಲಿಂದ ಜುನಾಲ್ ಹಾಗೂ ಲಿಶಾ ನೇರವಾಗಿ ಶಿರ್ವದ ಮನೆಗೆ ತೆರಳಿದರೆ, ಬೆನೆಡಿಕ್ಟ್ ಸಹೋದರಿ ಹಾಗೂ ಭಾವ ಸ್ಟೀಫನ್ ಫರ್ನಾಂಡಿಸ್ ಜತೆಗೆ ಮಣಿಪಾಲ ಆಸ್ಪತ್ರೆಯ ಶವಾಗಾರಕ್ಕೆ ತೆರಳಿದರು. ಬಳಿಕ `ಅವರ್ ಲೇಡಿ ಆಫ್ ಹೆಲ್ತ್' ಚರ್ಚಿಗೆ ಭೇಟಿ ನೀಡಿದ ಬೆನೆಡಿಕ್ಟ್ ಅವರು ಧರ್ಮಗುರು ರೆ.ಫಾ.ಸ್ಟ್ಯಾನಿ ತಾವ್ರೊ ಜತೆ ಅಂತ್ಯಕ್ರಿಯೆ ಬಗ್ಗೆ ಸುಮಾರು ಒಂದು ತಾಸು ಮಾತುಕತೆ ನಡೆಸಿದರು. ಬಳಿಕ ಜೆಸಿಂತಾ ಅವರ ಅಂತ್ಯಕ್ರಿಯೆ ನಡೆಯುವ ದಫನ ಭೂಮಿಗೆ ಧಾವಿಸಿದರು.

ಬೆನೆಡಿಕ್ಟ್ ಶಿರ್ವದ ಮನೆಗೆ ಧಾವಿಸುವಾಗ ರಾತ್ರಿ 7 ಗಂಟೆಯಾಗಿತ್ತು. ಅವರು ಮನೆ ತಲುಪುವಾಗ ನೀರವ ಮೌನ ನೆಲೆಸಿತ್ತು. ಬರ್ಬೋಜಾ ಅವರ ತಾಯಿ ಮತ್ತಿತರ ಕುಟುಂಬದ ಸದಸ್ಯರು ದುಃಖದ ಮಡುವಿನಲ್ಲಿದ್ದರು. ಜೆಸಿಂತಾ ಅವರ ತಾಯಿ ಭಾನುವಾರ ಶಿರ್ವಕ್ಕೆ ತೆರಳಿರಲಿಲ್ಲ. `ಅವರು ಸೋಮವಾರ ಬೆಳಿಗ್ಗೆ ಮನೆಗೆ ಬರುವರು' ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಿಬಿಸಿ, ಗಾರ್ಡಿಯನ್ ಹಾಗೂ ಆಸ್ಟ್ರೇಲಿಯದ ಕೆಲವು ಮಾಧ್ಯಮ ಪ್ರತಿನಿಧಿಗಳು ಸಹಿತ ಹತ್ತಾರು ವಿದೇಶಿ ಪತ್ರಕರ್ತರು ಹಾಜರಿದ್ದರು.

`ಅಂತ್ಯಕ್ರಿಯೆ ಚಿತ್ರೀಕರಣ ಬೇಡ'
ಜೆಸಿಂತಾ ಅವರ ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಜೆಸಿಂತಾ ಅವರ ಪಾರ್ಥಿವ ಶರೀರ ಹಾಗೂ ಆಕೆಯ ಮಕ್ಕಳ ಛಾಯಾಚಿತ್ರವನ್ನು ತೆಗೆಯದಂತೆ, ವಿಡಿಯೊ ಚಿತ್ರೀಕರಣ ನಡೆಸದಂತೆ ಬೆನೆಡಿಕ್ಟ್ ಬರ್ಬೋಜಾ ಮನವಿ ಮಾಡಿದರು.

`ಅಂತ್ಯಕ್ರಿಯೆಯ ಛಾಯಾಚಿತ್ರ ತೆಗೆಯಬಾರದು ಹಾಗೂ ವಿಡೀಯೊ ಚಿತ್ರೀಕರಣ ನಡೆಸಬಾರದು ಎಂಬುದು ಜೆಸಿಂತಾ ಅವರ ಕೊನೆಯಾಸೆಯೂ ಆಗಿತ್ತು' ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT