ADVERTISEMENT

ಶಾಸನ ಅಧ್ಯಯನ, ರಕ್ಷಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:30 IST
Last Updated 8 ಅಕ್ಟೋಬರ್ 2011, 9:30 IST
ಶಾಸನ ಅಧ್ಯಯನ, ರಕ್ಷಣೆ ಅಗತ್ಯ
ಶಾಸನ ಅಧ್ಯಯನ, ರಕ್ಷಣೆ ಅಗತ್ಯ   

ಶಿರ್ವ(ಕಟಪಾಡಿ): `ಮನುಕುಲದ ಪರಂಪರೆಯ ಅರಿವು ಇದ್ದರೆ ಮಾತ್ರ ಪ್ರಾಬಲ್ಯ ದೌರ್ಬಲ್ಯದ ಕುರಿತು ವಿಮರ್ಶಿಸಿ ಮುನ್ನಡೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇತಿಹಾಸದ ಸಾರುವ ಶಾಸನಗಳ ಅಧ್ಯಯನ ಮತ್ತು ರಕ್ಷಣೆ ಅಗತ್ಯವಾಗಿ ನಡೆಯಬೇಕಿದೆ~ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಗೋಪಾಲ್ ರಾವ್ ಅಭಿಪ್ರಾಯಪಟ್ಟರು.

ಶಿರ್ವದ ಸಂತ ಮೇರಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಯು.ಜಿ.ಸಿ. ಪ್ರಾಯೋಜಕತ್ವದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಂಡ `ಕರ್ನಾಟಕದಲ್ಲಿ ಐತಿಹಾಸಿಕ ಶಾಸನ ಅಧ್ಯಯನ ಹಾಗೂ ಕರವಾಳಿಯ ಶಾಸನಗಳ ಅಧ್ಯಯನ~ ಕುರಿತ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

`ದೇವಸ್ಥಾನಗಳ ಜೀರ್ಣೋದ್ಧಾರ ನೆಪದಲ್ಲಿ ಪುರಾತನ ಕೆತ್ತನೆ, ಪರಂಪರೆಯ ಆಕರಗಳಾಗಿ ಉಳಿದಿರುವ ವಸ್ತುಗಳನ್ನು ನಾಶಪಡಿಸಲಾಗುತ್ತಿದೆ. ಹಳೆಯ ದೇವಸ್ಥಾನದ ವಸ್ತುಗಳನ್ನು ಉಳಿಸಿ, ರಕ್ಷಿಸುವ ಕಾರ್ಯ ನಡೆಯಬೇಕಾಗಿದೆ. ಕರ್ನಾಟಕದಲ್ಲಿ 25 ಸಾವಿರಕ್ಕೂ ಅಧಿಕ ಶಾಸನಗಳಿವೆ. ಅದರಲ್ಲಿ 20 ಸಾವಿರ ಶಾಸನಗಳು ಪ್ರಕಟಗೊಂಡಿವೆ. ಇಂದು ವೃತ್ತಿಪರ ಇತಿಹಾಸ ತಜ್ಞರಿಗಿಂದ ಪ್ರವೃತ್ತಿ ಪರ ಇತಿಹಾಸ ಅಧ್ಯಯನಕಾರರು ಶಾಸನಗಳನ್ನು ಉಳಿಸಿ ಅಧ್ಯಯನ ನಡೆಸುವ ಕಾರ್ಯ ಮಾಡುತ್ತಿದ್ದಾರೆ~ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರ್ವ ಸೇಂಟ್ ಮೇರಿ ವಿದ್ಯಾಸಂಸ್ಥೆಗಳ ಸಂಚಾಲಕ ಫಾ.ಸ್ಟಾನಿ ತಾವ್ರೊ  ಮಾತನಾಡಿ, `ಭೂಮಿಗೆ ಮನುಷ್ಯನ ಏಕಾಏಕಿ ಆಗಮಿಸಿಲ್ಲ. ಮಾನವ ಸೃಷ್ಟಿಯ ಹಿಂದೆ ಹಲವಾರು ವಿಸ್ಮಯಗಳು ನಡೆದಿವೆ. ನಾವೂ ಸಂಸ್ಕೃತಿಯ ಭಾಗವಾಗಿದ್ದೇವೆ. ಆದ್ದರಿಂದ ನಮ್ಮ ಚರಿತ್ರೆಯ ಕುರಿತು ಅಧ್ಯಯನ ನಾವು ನಡೆಸಲೇ ಬೇಕಾಗಿದೆ~ ಎಂದರು.

ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಬಿ.ಜಗದೀಶ್ ಶೆಟ್ಟಿ, ಶಿರ್ವ ಸೇಂಟ್ ಮೇರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಜಿ. ಸಾಮಗ, ಪ್ರಾಂಶುಪಾಲ ಕ್ಲಾರೆನ್ಸ್ ಮಿರಾಂದಾ, ಪ್ರೊ.ಎಸ್. ಪದ್ಮನಾಭ ಭಟ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.