ADVERTISEMENT

ಶೈಕ್ಷಣಿಕ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:25 IST
Last Updated 18 ಫೆಬ್ರುವರಿ 2011, 10:25 IST

ಉಡುಪಿ: ಗ್ರಾಮೀಣ ಭಾಗದಲ್ಲಿ ಉನ್ನತ ಶಿಕ್ಷಣ ಬೆಳವಣಿಗೆಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಪೋಷಕರು ಅಗತ್ಯ ಕಾಳಜಿ ವಹಿಸಬೇಕು ಎಂದು ಶಾಸಕ ಹಾಗೂ ತೆಂಕನೀಡಿಯೂರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘುಪತಿ ಭಟ್ ಇಲ್ಲಿ ಹೇಳಿದರು.
ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ‘ರಕ್ಷಕ-ಶಿಕ್ಷಕ ಸಮಾವೇಶ’ವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. 

ಪೋಷಕರು ಕೇವಲ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಷ್ಟೇ ಅಲ್ಲದೇ ಅವರ ಪ್ರಗತಿಯ ಬಗ್ಗೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಂಬಂಧಿತ ಉಪನ್ಯಾಸಕರೊಂದಿಗೆ ಭೇಟಿಯಾಗಿ ಅಗತ್ಯ ಮಾಹಿತಿ ಪಡೆಯುವಂತೆ ಸಲಹೆ ನೀಡಿದ ಅವರು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪೋಷಕರು ಸಾಕಷ್ಟು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುದಿ ವಸಂತ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿ ಹಂತದ ವಿದ್ಯಾ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಸಹಕಾರ ಮತ್ತು ಜವಾಬ್ದಾರಿಗಳ ಬಗ್ಗೆ ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಯೋಗಾನಂದ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಸಂಚಾಲಕ ಹಾಗೂ ಉಪನ್ಯಾಸಕ ಮಹೇಶ್ ರಾವ್ ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಕೋರ್ಸ್‌ಗಳ ಬಗ್ಗೆ ಹಾಗೂ ಕಾಲೇಜಿನ ಇನ್ನಿತರ ಮಾಹಿತಿಗಳನ್ನು ಪೋಷಕರಿಗೆ  ನೀಡಿದರು.

ಈ ಸಂದರ್ಭದಲ್ಲಿ ಮುಂದಿನ ಅವಧಿಗೆ ಸಂಘದ ಅಧ್ಯಕ್ಷರಾಗಿ ಎವಿಲಿನ್ ಡಿಸಿಲ್ವ, ಉಪಾಧ್ಯಕ್ಷರಾಗಿ ಪ್ರೇಮಾ ನಾಯ್ಕ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಐತಪ್ಪ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.ಉಪನ್ಯಾಸಕ ಬಾಲಕೃಷ್ಣ ಹೆಗ್ಡೆ, ಉಪನ್ಯಾಸಕಿ ಉಮಾ ಮಹೇಶ್ವರಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಣನಾಥ್ ಎಕ್ಕಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.