ADVERTISEMENT

`ಸತ್ಪ್ರಜೆಗಳ ರೂಪಿಸುವ ಬಿಸಿಯೂಟ ನೌಕರರು'

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 8:22 IST
Last Updated 8 ಏಪ್ರಿಲ್ 2013, 8:22 IST

ಉಡುಪಿ: `ಸಾವಿರಾರು ವಿದ್ಯಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಒದಗಿಸುತ್ತಿರುವ ಬಿಸಿಯೂಟ ನೌಕರರು ಉತ್ತಮ ಪ್ರಜೆಗಳನ್ನು ರೂಪಿಸುವ ರೂವಾರಿಗಳು' ಎಂದು ಭಾರತೀಯ ಜೀವ ವಿಮಾ ನಿಗಮದ  ಹಿರಿಯ ವಿಭಾಗಾಧಿಕಾರಿ ಎನ್.ಎಸ್. ಶಿರಹಟ್ಟಿ ಹೇಳಿದರು.

`ಅಂತರರಾಷ್ಟ್ರೀಯ ಮಹಿಳಾ ದಿಚರಣೆ'ಯ ಅಂಗವಾಗಿ, ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಮಹಿಳಾ ಉಪಸಮಿತಿಯ ವತಿಯಿಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಂಧತ್ವ ನಿವಾರಣಾ ವಿಭಾಗ, ಪ್ರಸಾದ್ ನೇತ್ರಾಲಯ ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಕ್ಷರ ದಾಸೋಹ ಬಿಸಿಯೂಟ ನೌಕರರ  ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. 

`ನೇತ್ರ ತಪಾಸಣಾ ಶಿಬಿರದಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ವಿಮಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತೆಯರು ಅಭಿನಂದನಾರ್ಹರು. ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಎಲ್‌ಐಸಿ ಬಗ್ಗೆ ಸದ್ಭಾವನೆ ಮೂಡಿಸಲು ಸಹಕಾರಿಯಾಗಲಿದೆ.

ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಉಚಿತ ಕನ್ನಡಕ ವಿತರಣೆಯಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು. ಮುಂದಿನ ದಿನಗಳಲ್ಲಿಯೂ ಸಾಮಾಜಿಕ ಕಳಕಳಿಯಿಂದ ಇಂತಹ ಕಾರ್ಯಕ್ರಮಗಳನ್ನು ನೌಕರರು ನಡೆಸಬೇಕು' ಎಂದರು.

ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಂಡು ಬಂದ ಶಿಬಿರಾರ್ಥಿಗಳಿಗೆ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿಗಳು ಉಚಿತ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಕನ್ನಡಕದ ಅವಶ್ಯಕತೆ ಇರುವ ಶಿಬಿರಾರ್ಥಿಗಳಿಗೆ ವಿಮಾ ನೌಕರರ ಸಂಘದ ಕಚೇರಿಯಲ್ಲಿ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚ್ಯಾರಿಟೇಲ್ ಟ್ರಸ್ಟ್‌ನ ಟ್ರಸ್ಟಿ ಡಾ. ಕೆ. ಕಷ್ಣಪ್ರಸಾದ್, ವಿಮಾ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಯು.ಗುರುದತ್ ಹಾಗೂ ಮಹಿಳಾ ಸಂಚಾಲಕಿ ನಿರ್ಮಲ ಉಪಸ್ಥಿತರಿದ್ದರು.

ವಿಮಾ ನೌಕರರ ಸಂಘದ ಅಧ್ಯಕ್ಷ ಕೆ. ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಪ್ರಮೋದ ಪ್ರಭು ಕಾರ್ಯಕ್ರಮವನ್ನು ನಿರ್ವಹಿಸಿದರು, ಕವಿತಾ ಎಸ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.