ADVERTISEMENT

ಸಮುದಾಯದ ಒಳಿತಿಗೆ ಸಂಘಟನೆ ಶ್ರಮಿಸಲಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 8:55 IST
Last Updated 14 ಅಕ್ಟೋಬರ್ 2011, 8:55 IST

ನಾಗೂರು (ಬೈಂದೂರು) : ಸಾಮಾಜಿಕ ಸಂಘಟನೆಗಳು ತಾವು ಪ್ರತಿನಿಧಿಸುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪರಿಹಾರಕ್ಕೆ ಶ್ರಮಿಸಬೇಕು ಎಂದು ಸಾಲಿಗ್ರಾಮದ ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ಜಿ. ರಾಮಕೃಷ್ಣ ಐತಾಳ್ ಹೇಳಿದರು.

ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಅದರ ಕಿರಿಮಂಜೇಶ್ವರ ಅಂಗಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದರು. ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಕಾರ್ಯದರ್ಶಿ  ಆನಂದರಾಮ ಮಧ್ಯಸ್ಥ, ಸಂಸ್ಥೆ ಅಧ್ಯಕ್ಷ ಸುಬ್ರಹ್ಮಣ್ಯ ನಾವಡ,  ಕಾರ್ಯದರ್ಶಿ ಮಂಜುನಾಥ ಹೊಳ್ಳ, ಬಿಲಿಯನ್ ಫೌಂಡೇಶನ್ ಪ್ರತಿನಿಧಿ ವಾಸುದೇವ ನಾವಡ, ಮಹಿಳಾ ವೇದಿಕೆ ಅಧ್ಯಕ್ಷೆ ದಾಕ್ಷಾಯಿಣಿ ಐತಾಳ್ ಇದ್ದರು.
ವಿಶೇಷ ಸಾಧನೆ ಮಾಡಿದ ದೇವಳಿ ಗಣೇಶ ಐತಾಳ್, ಆಳುವಳ್ಳಿ ನಾಗವೇಣಿ ಕಾರಂತ, ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ ಗಳಿಸಿದ ಲೇಖಕ ಕೆ. ಶಿವಾನಂದ ಕಾರಂತ, ಮಹಿಳಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಹುದ್ದೆಗೇರಿದ ಮಂಜುನಾಥ ಕಾರಂತರನ್ನು ಸತ್ಕರಿಸಲಾಯಿತು. 16 ವಿದ್ಯಾರ್ಥಿಗಳಿಗೆ  24,000, ಬಿಲಿಯನ್ ಫೌಂಡೇಶನ್ ವತಿಯಿಂದ 4 ವಿದ್ಯಾರ್ಥಿಗಳಿಗೆ 8,000 ರೂಪಾಯಿ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಿಪಿಎಂ ಸಮ್ಮೇಳನ
ಕುಂದಾಪುರ: ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುವುದರೊಂದಿಗೆ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪಕ್ಷ ಸಂಘಟಿಸಲಾಗುತ್ತಿದೆ. ಪಕ್ಷಕ್ಕೆ ಚುನಾವಣೆ ಹಾಗೂ ಗೆಲುವೇ ಮುಖ್ಯವಲ್ಲ, ಸಮಾಜದ ಕಟ್ಟಕಡೆಯ ವರ್ಗದ ಜನರನ್ನು ಕಾಡುವ ಸಮಸ್ಯೆಗಳ ಪರಿಹಾರದ ಗುರಿಯೇ ಮುಖ್ಯ  ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ ಮಾಧವ ಹೇಳಿದರು.

ಸೋಮವಾರ ನಡೆದ ಸಿಪಿಎಂ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸ್ವಜನ ಪಕ್ಷಪಾತ, ಲಂಚಗುಳಿತನ, ಭೂಕಬಳಿಕೆ, ಗಣಿ ಹಗರಣದಿಂದ ಹಣ ಸಂಪಾದಿಸುವ ರಾಜ್ಯದ ರಾಜಕಾರಣಿಗಳ ಕಂಡು ರಾಜ್ಯದ ಜನತೆ ರೋಸಿ ಹೋಗಿದ್ದಾರೆ ಎಂದರು. ಯು.ದಾಸು ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಹಾಬಲ ವಡೇರಹೋಬಳಿ, ವೆಂಕಟೇಶ ಕೋಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.