ADVERTISEMENT

ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ

ರಾಮಕೃಷ್ಣ ಸಿದ್ರಪಾಲ
Published 4 ಅಕ್ಟೋಬರ್ 2011, 8:40 IST
Last Updated 4 ಅಕ್ಟೋಬರ್ 2011, 8:40 IST

ಉಡುಪಿ: ಉಡುಪಿ ಕಲ್ಲಿದ್ದಲು ಉಷ್ಣವಿದ್ಯುತ್ ಸ್ಥಾವರದ (ಯುಪಿಸಿಎಲ್) ಮೊದಲ ಹಂತ ಕಾರ್ಯಾರಂಭ ಮಾಡಿದ ಬಳಿಕ ಉಂಟಾಗಿರುವ ಪರಿಸರ ಮಾಲಿನ್ಯದ ಬಗ್ಗೆ ಕಂಪೆನಿ ಕಾಳಜಿ ವಹಿಸದೇ ನಿರ್ಲಕ್ಷಿಸುತ್ತಲೇ ಬಂದಿದೆ. ಸರ್ಕಾರವೇ ಇಚ್ಛಾಶಕ್ತಿ ಪ್ರದರ್ಶಿಸಿ ಸಮಸ್ಯೆ ಸರಿಪಡಿಸುವವರೆಗೆ ಸ್ಥಾವರ ಬಂದ್ ಮಾಡಿಸಬೇಕು~ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇಲ್ಲಿ ಆಗ್ರಹಿಸಿದರು.

ಹೈದರಾಬಾದ್‌ನಲ್ಲಿ ನಾಲ್ಕು ತಿಂಗಳ ತಮ್ಮ ಚಾತುರ್ಮಾಸ ವ್ರತ ಪೂರೈಸಿ ಉಡುಪಿ ಪೇಜಾವರ ಅಧೋಕ್ಷಜ ಮಠಕ್ಕೆ ಮರಳಿರುವ ಸ್ವಾಮೀಜಿ ಸೋಮವಾರ `ಪ್ರಜಾವಾಣಿ~ಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
`ಯುಪಿಸಿಎಲ್‌ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಾರ್ವಜನಿಕರು ಈಗಾಗಲೇ ದೂರು ನೀಡಿ ಆಗಿದೆ.

ನಾನೂ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದೇನೆ. ನಂತರ ರಾಜ್ಯ ಮಾಲಿನ್ಯ ಮಂಡಳಿಯವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಎರಡು ದಿನ ಪರಿಶೀಲಿಸಿ ವರದಿ ನೀಡಿದ್ದಾರೆ. ಯುಪಿಸಿಎಲ್‌ನಿಂದ ಪರಿಸರ ಮಾಲಿನ್ಯವಾಗಿದ್ದು ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಅವರ ವರದಿಯಲ್ಲೂ ಉಲ್ಲೇಖಿಸಲಾಗಿದೆ. ಆದರೂ ಕಂಪೆನಿ ಅದ್ಯಾವುದನ್ನೂ ಪರಿಗಣಿಸದೇ ಕೆಲಸ ಮುಂದುವರಿಸಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ತಾವು ಹೈದರಾಬಾದ್‌ನಲ್ಲಿದ್ದಾಗ, ಮಳೆಗಾಲದಲ್ಲಿ ಕೂಡ ಅಲ್ಲಿ ಸಮಸ್ಯೆ ಮುಂದುವರಿದಿರುವ ಬಗ್ಗೆ ಯುಪಿಸಿಎಲ್ ಸುತ್ತಮುತ್ತಲ ಜನರು ದೂರಿಕೊಂಡಿದ್ದಾರೆ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚುವುದಿಲ್ಲವೇ? ಖಂಡಿತವಾಗಿಯೂ ಕಂಪೆನಿಯವರು ಪರಿಸರ ಸಮಸ್ಯೆಗಳನ್ನು ಪರಿಹರಿಸಬೇಕಿತ್ತು~ ಎಂದರು.

2ನೇ ಹಂತಕ್ಕೆ ಅವಕಾಶವಿಲ್ಲ: ಇತ್ತೀಚೆಗೆ ಇಂಧನೆ ಸಚಿವೆ ಶೋಭಾ ಕರಂದ್ಲಾಜೆಅವರು ಯುಪಿಸಿಎಲ್ 2ನೇ ಘಟಕವನ್ನು ಡಿಸೆಂಬರ್ ಬಳಿಕ ಕಾರ್ಯಾರಂಭ ಮಾಡಲಾಗುವುದು ಎಂದು ಹೇಳಿಕೆ ನೀಡಿರುವ ಬಗ್ಗೆ ಗಮನ ಸೆಳೆದಾಗ, `ಮೊದಲ ಹಂತವೇ ದೋಷ ಪೂರಿತವಾಗಿರುವಾಗ 2ನೇ ಹಂತ ಕಾರ್ಯಾರಂಭ ಮಾಡುವುದು ಸಾಧುವಲ್ಲ. ಅದಕ್ಕೆ ಯಾರೂ ಅವಕಾಶ ನೀಡುವುದಿಲ್ಲ~ ಎಂದರು.

ಇತ್ತೀಚೆಗೆ ಮೈಸೂರು ದಸರಾ ಉದ್ಘಾಟನೆಗೆ ಹೋದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳ ಜತೆಗೂ ಯುಪಿಸಿಎಲ್ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ ಸ್ವಾಮೀಜಿ, `ಜನರ ಸಂಕಷ್ಟಗಳಿಗೆ ಸ್ಪಂದಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ, ಕಂಪೆನಿಯಿಂದ ಸಮಸ್ಯೆಯಾದರೆ ಅದನ್ನು ನಿಲ್ಲಸಬೇಕಾಗುತ್ತದೆ~ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ವರದಿ ನೋಡಿ ನಿರ್ಧಾರ ಪ್ರಕಟ: ಇತ್ತೀಚೆಗೆ ಸರ್ಕಾರವೇ ನಿಯಮಿಸಿದ ಆರು ಜನರ ತಜ್ಞರ ಸಮಿತಿಯಲ್ಲಿ ತಾವು ಸೂಚಿಸಿದ ಇಬ್ಬರು ತಜ್ಞರನ್ನು ಕೂಡ ನಿಯೋಜಿಸಲಾಗಿದೆ. ಅವರೆಲ್ಲರೂ ಇಲ್ಲಿಗೆ ಭೇಟಿ ನೀಡಿ ಯುಪಿಸಿಎಲ್‌ನ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಇದೇ 17ರಂದು ಪಡುಬಿದ್ರಿಯಲ್ಲಿ ಸಾರ್ವಜನಿಕರ ಅಭಿಪ್ರಾಯವನ್ನು ಈ ತಜ್ಞರ ತಂಡ ಆಲಿಸಲಿದೆ. ಬಳಿಕ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. 

`ಯುಪಿಸಿಎಲ್‌ನವರು ಇಷ್ಟರಲ್ಲಿಯೇ ಕೆಲಸ ನಿಲ್ಲಿಸಬೇಕಿತ್ತು. ಏನೆಲ್ಲ ತೊಂದರೆಗಳಾಗಿವೆ ಎನ್ನುವುದನ್ನು ಪರಿಶೀಲಿಸಿ ಅವುಗಳನ್ನು ಸರಿಪಡಿಸಿ ವಿದ್ಯುತ್ ಉತ್ಪಾದನೆ ಮುಂದುವರಿಸಬೇಕು. ಪರಿಸರಕ್ಕೆ ಹಾನಿಯಾಗದಂತೆ ಹೇಗೆ ಯೋಜನೆ ಮುಂದುವರಿಸಬೇಕು ಎಂಬ ಬಗ್ಗೆ ಯೋಚಿಸಿ ಹೆಜ್ಜೆ ಇಡಬೇಕು. ಆದರೆ ಹಾಗೆ ಮಾಡಿದಂತೆ ಕಾಣುತ್ತಿಲ್ಲ. ಯಾರ ಮಾತಿಗೂ ಕಂಪೆನಿ ಗೌರವ ನೀಡುತ್ತಿಲ್ಲ~ ಎಂದರು.

ಯುಪಿಸಿಎಲ್ ವಿರುದ್ಧದ ತಮ್ಮ ಹೋರಾಟದ ನಿಲುವಿನಲ್ಲಿಯಂತೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸ್ವಾಮೀಜಿ, ಇದೇ 17ರ ಬಳಿಕ ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿ ತಮ್ಮ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.