ADVERTISEMENT

ಸವಾಲು ಎದುರಿಸುವ ಮನೋಭಾವ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:05 IST
Last Updated 16 ಅಕ್ಟೋಬರ್ 2012, 9:05 IST

ಕಾರ್ಕಳ: ಸವಾಲು ಯಶಸ್ವಿಯಾಗಿ ನಿಭಾಯಿಸುವ ಚಾಕಚಕ್ಯತೆ ಅವಶ್ಯವಾಗಿದೆ. ಕಂಪೆನಿಗಳು ಉದ್ಯೋಗಿಗಳನ್ನು ಆಯ್ಕೆಮಾಡಿಕೊಳ್ಳುವಾಗ ಅವರ ಸಾಮಾನ್ಯ ಪರಿಣತಿಗಳನ್ನು ಪರಿಗಣಿಸುವುದರ ಜತೆಗೆ ಈ ಅಂಶವನ್ನೂ ಗಮನಕ್ಕೆ ತೆಗೆದುಕೊಳ್ಳುತ್ತವೆ ಎಂದು ಜಸ್ಟೀಸ್ ಕೆ. ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯ ಪ್ರಾಧ್ಯಾಪಕ ಡಾ.ಕೆ.ಸುಧೀರ್ ರಾಜ್ ಇಲ್ಲಿ ತಿಳಿಸಿದರು.

ತಾಲ್ಲೂಕಿನ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಥಿಕ ಎಂಜಿನಿಯರ್ಸ್‌ನ ವಿದ್ಯಾರ್ಥಿ ಶಾಖೆಯನ್ನು  ಉದ್ಘಾಟಿಸಿ ಮಾತನಾಡಿದ ಅವರು ವ್ಯಕ್ತಿ ಪ್ರತಿಕ್ಷಣ ತೊಂದರೆಗಳನ್ನು ಅನುಭವಿಸುತ್ತಲೇ ಇರುತ್ತಾನೆ.

ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಯಶಸ್ವಿಯಾಗಿ ನಿಭಾಯಿಸುವುದರಿಂದ ಯಶಸ್ಸು ಸಿದ್ಧಿಸುತ್ತದೆ. ವ್ಯಕ್ತಿ ತಾಳ್ಮೆಯಿಂದ ಸೃಜನಶೀಲತೆಯಿಂದ ಮನಸ್ಸನ್ನು ಸಂತುಷ್ಟವಾಗಿರಿಸುವುದರಿಂದ ಪ್ರತಿ ಸಮಸ್ಯೆಯ ಮೂಲವನ್ನರಿತು ಅದನ್ನು ಪರಿಪಕ್ವವಾಗಿ ನಿಭಾಯಿಸಬಹುದು ಎಂದರು.

ಉಪಪ್ರಾಂಶುಪಾಲರಾದ ಡಾ.ರಮೇಶ್ ಮಿತ್ಯಂತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಕಾಶಗಳು ಯಾವಾಗ ಬೇಕಾದರೂ ಒಲಿದು ಬರಬಹುದು. ಅದರತ್ತ ಚಿಂತಿಸಿ ಕಾರ್ಯಪ್ರವೃತ್ತರಾದರೆ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಅವಕಾಶಗಳನ್ನು ಬಾಚಿ ತಮ್ಮದಾಗಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಶಾಖೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT