ಉಡುಪಿ: ಕಳೆದ ಮೂರು ವರ್ಷಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಸಾಧನೆ ಮಾಡಿದವರು ಸನ್ಮಾನ ಸ್ವೀಕರಿಸುವುದು ಸಾಮಾನ್ಯ. ಆದರೆ ಯಾವುದೇ ಕೆಲಸ– ಸಾಧನೆ ಮಾಡದ ಸಚಿವ ಪ್ರಮೋದ್ ಮಧ್ವರಾಜ್ ಅವರು ಸನ್ಮಾನ ಸ್ವೀಕರಿಸುತ್ತಿರುವುದಾದರೂ ಏಕೆ? ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರಶ್ನಿಸಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ನಗರ ಬಿಜೆಪಿಯ ಪ್ರಥಮ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾ ಡಿದ ಅವರು, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಚಾಲನೆ ಸಿಕ್ಕಿಲ್ಲ. ಯಾವುದೇ ಹೊಸ ಕಾಮಗಾರಿಗಳೂ ಆರಂಭ ವಾಗಿಲ್ಲ. ನಗರಸಭೆ ಭ್ರಷ್ಟಾಚಾರದ ಕೂಪವಾಗಿದೆ ಎಂದರು.
ಕಾರ್ಯಕರ್ತರ ಪರಿಶ್ರಮದಿಂದ ಲೋಕಸಭಾ ಚುನಾವಣೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿಯೂ ಗೆಲುವು ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಉಡುಪಿ ನಗರಸಭೆಯಲ್ಲಿಯೂ ಮತ್ತೆ ಬಿಜೆಪಿ ಆಡಳಿತ ತರಲು ಪ್ರಯತ್ನಿಸಬೇಕು ಎಂದರು.
ಕಾರ್ಯಕಾರಿಣಿ ಉದ್ಘಾಟಿಸಿ ಮಾತ ನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ‘ಮಿಷನ್ 150’ ಗುರಿ ನಿಗದಿಪಡಿಸಿದ್ದಾರೆ.
ಜಿಲ್ಲೆಯ ಎಲ್ಲ ಐದು ವಿಧಾನಸಭಾ ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಇದಕ್ಕೆ ನಾವೂ ಕೊಡುಗೆ ನೀಡಬೇಕು. ಮುಂ ದಿನ ಎರಡು ವರ್ಷಗಳಲ್ಲಿ ಸಂಘಟನೆ ಯನ್ನು ಇನ್ನಷ್ಟು ಬಲಪಡಿಸಬೇಕು. ಪಕ್ಷ ದಿಂದ ಹೊರ ಹೋಗಿರುವ ಮುಖಂಡ ರನ್ನು ಮತ್ತೆ ಕರೆ ತರಬೇಕು ಎಂದರು.
ಉಡುಪಿ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜನ ಹೆಗ್ಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ,
ನಗರಸಭೆಯ ಪ್ರತಿಪಕ್ಷದ ನಾಯಕ ಡಾ. ಎಂ.ಆರ್. ಪೈ, ನಗರ ಉಸ್ತುವಾರಿ ಕಪ್ಪೆಟ್ಟು ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ನಗರ ಪ್ರಧಾನ ಕಾರ್ಯದರ್ಶಿ ಉಪೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಪೂಜಾರಿ ಸ್ವಾಗತಿಸಿದರು.
*
ಪ್ರಮೋದ್ ಮಧ್ವರಾಜ್ ಅವರ ಪ್ರತಿ ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅಭಿನಂದನಾ ಕಾರ್ಯಕ್ರಮಗಳೇ ಹೆಚ್ಚಾಗಿರುತ್ತವೆ. ಆದ್ದರಿಂದ ಅವರನ್ನು ಸನ್ಮಾನ್ಯ ಸಚಿವ ಎನ್ನುವ ಬದಲು ‘ಸನ್ಮಾನ’ ಸಚಿವ ಎಂದರೆ ಸೂಕ್ತ.
-ಕೆ. ರಘುಪತಿ ಭಟ್,
ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.