ADVERTISEMENT

ಸಾವಯವ ಕೃಷಿ ನಾಶಕ್ಕೆ ಹುನ್ನಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 6:30 IST
Last Updated 21 ಏಪ್ರಿಲ್ 2012, 6:30 IST

ಮಂಗಳೂರು:`ದೇಶದ ರೈತರು ಸಾವಯವ ಕೃಷಿಯತ್ತ ಮರಳುತ್ತಿದ್ದು, ಈ ಪದ್ಧತಿ ದಿನೇ ದಿನೇ ಪ್ರಾಬಲ್ಯ ಪಡೆಯುತ್ತಿದೆ. ಈ ಬೆಳವಣಿಗೆ ಸಹಿಸಲಾಗದೆ ಕಾರ್ಪೊರೇಟ್ ಕಂಪೆನಿಗಳು ಸಾವಯವ ಕೃಷಿಯನ್ನು ನಾಶ ಮಾಡುವ ಹುನ್ನಾರ ನಡೆಸಿವೆ~ ಎಂದು ಪ್ರಗತಿಪರ ಕೃಷಿಕ  ಸನ್ನಿ ಡಿಸೋಜ ಆರೋಪಿಸಿದರು.

ಸುಸ್ಥಿರ ಅಭಿವೃದ್ಧಿ ಕೇಂದ್ರ, ಸಾಮಾಜಿಕ ಬದಲಾವಣೆ ನಿರ್ವಹಣಾ ವೇದಿಕೆ, ಹೈದರಾಬಾದಿನ ಕುಲಾಂತರಿ ತಂತ್ರಜ್ಞಾನಕ್ಕೆ ದಕ್ಷಿಣದ ಪ್ರತಿಕ್ರಿಯೆ ಸಂಸ್ಥೆ ಹಾಗೂ ರೋಶನಿ ನಿಲಯ ಸಮಾಜ ಕಾರ್ಯ ಕಾಲೇಜಿನ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನಲ್ಲಿ `ಬಿಟಿ ಹತ್ತಿ ಮತ್ತು ಅದರಾಚೆ~ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಸಾವಯವ ಕೃಷಿ ಹಾಗೂ ಕುಲಾಂತರಿ ತಂತ್ರಜ್ಞಾನಗಳು ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ. ಒಂದೆಡೆ ಸಾವಯವ ಕೃಷಿಗೆ ಉತ್ತೇಜನ ನೀಡುವ ಬಗ್ಗೆ ಮಾತನಾಡುವ ಸರ್ಕಾರ ಇನ್ನೊಂದೆಡೆ ಕುಲಾಂತರಿ ತಂತ್ರಜ್ಞಾನಕ್ಕೆ ಬೆಂಬಲ ಸೂಚಿಸುತ್ತಿದೆ. ಇದು ರೈತರ ಗೊಂದಲಕ್ಕೆ ಕಾರಣವಾಗಿದೆ~ ಎಂದರು.

`250 ದಶಲಕ್ಷ ಟನ್ ಆಹಾರ ಉತ್ಪಾದನೆಯ ಸಾಧನೆಗಾಗಿ ಭಾರತ ವನ್ನು ವಿಶ್ವಬ್ಯಾಂಕ್ ಪ್ರಶಂಸಿಸಿತು. ಭಾರತದ ರೈತರು ಸಾವಯವ ಕೃಷಿಗೆ ಮರಳ್ದ್ದಿದೇ ಈ ಸಾಧನೆಗೆ ಕಾರಣ~ ಎಂದರು.  

`ಬಿ.ಟಿ ಹತ್ತಿ ಬೆಳೆಯಲು ಆರಂಭಿಸಿದ ಬಳಿಕ ಹತ್ತಿ ಉತ್ಪಾದನೆ ಗಣನೀಯ ವಾಗಿ ಹೆಚ್ಚಿದೆ ಎನ್ನಲಾಗುತ್ತಿದೆ. ಆರು ವರ್ಷದಲ್ಲಿ 25 ಲಕ್ಷ ಎಕರೆ ಭೂಮಿ ಹತ್ತಿ ಬೆಳೆಗೆ ಹೆಚ್ಚುವರಿಯಾಗಿ ಸೇರಿಕೊಂಡ್ದ್ದಿದ್ದೇ ಈ ಉತ್ಪಾದನೆ ಹೆಚ್ಚಳಕ್ಕೆ ಕಾರಣ.
 
ಬಿ.ಟಿ ಹತ್ತಿ ಮೊದಲ ಎರಡು ವರ್ಷ ಉತ್ತಮ ಇಳಿವರಿ ನೀಡುವುದು ನಿಜ. ಆದರೆ ತದನಂತರ ಇಳುವರಿಯಲ್ಲಿ ಗಣನೀಯ ಇಳಿಕೆ ಕಾಣುತ್ತದೆ. ಬಿ.ಟಿ ಹತ್ತಿಗೆ ಕೀಟಬಾಧೆ ಇಲ್ಲ ಎಂದು ಹೇಳಲಾಯಿತು. ಆದರೆ ಇದಕ್ಕೆ ಭಾರಿ ಪ್ರಮಾಣದಲ್ಲಿ ಕೀಟನಾಶಕ ಬಳಸಲಾಗುತ್ತಿದೆ. ಸಾಂಪ್ರದಾಯಿಕ ಹತ್ತಿಗಿಂತ ಬಿ.ಟಿ. ಹತ್ತಿ ಬೆಳೆಗೆ ಹೆಚ್ಚು ಖರ್ಚು~ ಎಂದರು.

`ನಮ್ಮಲ್ಲಿ ಗದ್ದೆಗೆ ಕಾಲಿಡದವರು ಕೃಷಿ ಅಧಿಕಾರಿಗಳಾಗುತ್ತಾರೆ. ಅವರು ನೀಡುವ ಸಲಹೆಯನ್ನು ರೈತರು ಪಾಲಿಸಬೇಕಾದುದು ದುರಂತ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸುಸ್ಥಿರ ಅಭಿವೃದ್ಧಿ ಕೇಂದ್ರದ ಪ್ರೊ. ರೀಟಾ ನೋರೊನ್ಹ, ಕಾಲೇಜಿನ ಪ್ರಾಂಶುಪಾಲರಾದ ಸೋಫಿಯಾ ಫರ್ನಾಂಡಿಸ್, ವಿಭಾಗ ಮುಖ್ಯಸ್ಥೆ ಜೂಲಿಯೆಟ್, ಸಾಮಾಜಿಕ ಬದಲಾವಣೆ ನಿರ್ವಹಣೆ ವೇದಿಕೆ ಸಂಚಾಲಕ ರಾಜೇಂದ್ರ ಮೊದಲಾದವರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.