ADVERTISEMENT

ಸುಳ್ಯ: ವಸತಿ ಯೋಜನೆ ವಿಶೇಷ ಸಭೆ.4000 ಬಸವ-ಇಂದಿರಾ ಮನೆ ನಿರ್ಮಾಣ ಗುರಿ.

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 9:35 IST
Last Updated 16 ಮಾರ್ಚ್ 2011, 9:35 IST

ಸುಳ್ಯ: ಪ್ರಸಕ್ತ 2010-11ನೇ ಸಾಲಿನ ಬಸವ ಇಂದಿರಾ ಆವಾಜ್ ಯೋಜನೆಯಡಿ ವಸತಿ ನಿರ್ಮಾಣಕ್ಕೆ ಪಂಚಾಯಿತಿ ಮಟ್ಟದಲ್ಲಿ ಭೌತಿಕ ಗುರಿ ನಿಗದಿಪಡಿಸುವ ಬಗ್ಗೆಸುಳ್ಯ ತಾಪಂ ಸಭಾಂಗಣದಲ್ಲಿ ವಿಶೇಷ ಸಭೆ ಇತ್ತೀಚೆಗೆ ನಡೆಯಿತು.ತಾಪಂ ಅಧ್ಯಕ್ಷ ಮುಳಿಯ ಕೇಶವ ಭಟ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ ರೈ, ಜಿಪಂ ಸದಸ್ಯರಾದ ಆಶಾ ತಿಮ್ಮಪ್ಪ, ನವೀನ ಕುಮಾರ ರೈ ಕೆ.ಎಸ್.ದೇವರಾಜ್, ತಾಲ್ಲೂಕಿನ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಪಿಡಿಓಗಳು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ತಾಪಂ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಕಾರಿ ಮಲ್ಲೇಸ್ವಾಮಿ ಮಾತನಾಡಿ, ಬಸವ ಇಂದಿರಾ ವಸತಿ ಯೋಜನೆಯಡಿ ಒಟ್ಟು 4000 ಮನೆಗಳನ್ನು ನಿಗದಿಪಡಿಸುವ ಬಗ್ಗೆ ಆದೇಶ ಬಂದಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಸಾವಿರ ಮನೆಯ ಗುರಿ ನಿಗದಿಪಡಿಸಲಾಗಿತ್ತು. ಇದು ಹೆಚ್ಚಾಗುವ ನಿರೀಕ್ಷೆಯೂ ಇದೆ. ಶೇ. 6ರಷ್ಟು ಪ.ಜಾತಿ, ಪ.ಪಂ.ಕ್ಕೆ ಕಾಯ್ದಿರಿಸಬೇಕು.

ಗ್ರಾಪಂಗೆ ನೀಡಿದ ಒಟ್ಟು ಮನೆಗಳ ಪೈಕಿ ಶೇ.15ರಷ್ಟು ಅಲ್ಪಸಂಖ್ಯಾತರಿಗೆ ಕಾಯ್ದಿರಿಸಬೇಕು. ಒಟ್ಟು ಮನೆಗಳ ಪೈಕಿ ಶೇ.5ರಷ್ಟು ಅಂಗವಿಕಲರಿಗೆ ಕಾಯ್ದಿರಿಸಬೇಕು ಎಂದರು.
ಕಡ್ಡಾಯವಾಗಿ ಕಾಯ್ದಿರಿಸಿದ ಗುರಿಯ ಪ್ರಕಾರ ಫಲಾನುಭವಿಗಳ ಲಭ್ಯವಿಲ್ಲದಿದ್ದಲ್ಲಿ ಈ ಬಗ್ಗೆ ಕಾರ್ಯನಿರ್ವಾಹಕ ಅಕಾರಿಗಳ ದೃಢೀಕರಣ ನೀಡಿದಲ್ಲಿ, ಗುರಿಯನ್ನು ಇತರ ವರ್ಗಗಳಿಗೆ ವರ್ಗಾಯಿಸಬಹುದು ಎಂದು ಅವರು ವಿವರ ನೀಡಿದರು.

ಪಂಚಾಯಿತಿ ಸ್ವಾಧೀನಕ್ಕೆ ಒಳಪಟ್ಟ ಜಾಗದಲ್ಲಿ ನಿವೇಶನ ಹಂಚಿಕೆ ವಿಚಾರದ ಬಗ್ಗೆ, 2011-12ನೇ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ, ಕುಡಿಯುವ ನೀರು ಪೂರೈಕೆ ಬಗ್ಗೆ ಮಲ್ಲೇಸ್ವಾಮಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.