ADVERTISEMENT

ಸುಳ್ಳಿನ ಸಹಾಯ ಪಡೆದವರಿಗೆ ತಕ್ಕ ಶಾಸ್ತಿ: ಪ್ರಮೋದ್‌

ಕಾರ್ಯಕರ್ತರಿಗೆ ಕೃತಜ್ಞತೆ ಸಮರ್ಪಣಾ ಸಭೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 12:43 IST
Last Updated 20 ಮೇ 2018, 12:43 IST

ಉಡುಪಿ: ಸುಳ್ಳಿನ ಮೂಲಕ ಸಾಧಿಸಿದ ಗೆಲುವು ಶಾಶ್ವತವಲ್ಲ. ಸತ್ಯಕ್ಕೆ ಇಂದಲ್ಲ ನಾಳೆ ಜಯ ಸಿಗುತ್ತದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಘಟಕ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಮಾತನಾಡಿದ ಅವರು, ‘ಸುಳ್ಳಿನ ಮೂಲಕ ಪಡೆದ ಅಧಿಕಾರ ಹೆಚ್ಚು ಸಮಯ ಉಳಿಯುವುದಿಲ್ಲ ಎನ್ನುವುದಕ್ಕೆ ಬಿ.ಎಸ್‌ ಯಡಿಯೂರಪ್ಪ ಅವರೇ ಸಾಕ್ಷಿ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜೀನಾಮೆ ನೀಡಿದ್ದಾರೆ. ಇದು ಸತ್ಯಕ್ಕೆ ಸಿಕ್ಕ ಮೊದಲ ಜಯ. ವಾಮಮಾರ್ಗ ಅನುಸರಿಸಿದವರಿಗೆ ಇದೇ ಗತಿಯಾಗಲಿದೆ ಎಂದರು.

ಜನರು ಕ್ಷೇತ್ರದ ಅಭಿವೃದ್ಧಿ ನೋಡಿ ಮತ ಹಾಕಿಲ್ಲ. ಕರಾವಳಿಯ ಕಾಂಗ್ರೆಸ್‌ ಪಕ್ಷದ ಎಲ್ಲಾ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಆದರೆ ಬಿಜೆಪಿಯ ನಿರಂತರ ಅಪಪ್ರಚಾರದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಜನತೆಗೆ ಶೀಘ್ರ ವಾಸ್ತವದ ಅರಿವಾಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲವನ್ನು ಸೂಚಿಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಒಬ್ಬ ಶಾಸಕನಾಗಿ ಕ್ಷೇತ್ರವನ್ನು ಎಷ್ಟೆಲ್ಲ ಅಭಿವೃದ್ಧಿಪಡಿಸಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರು ರಾಜನ ಸ್ಥಾನದಲ್ಲಿ ಇರುತ್ತಾರೆ. ಅವರ ತೀರ್ಮಾನವನ್ನು ನಾನು ಸಂತೋಷದಿಂದ ಸ್ವೀಕರಿಸಿದ್ದೇನೆ. ಜನರಿಗೆ ಏನೇ ಸಮಸ್ಯೆಯಾದರೂ ಆದನ್ನು ಪರಿಹರಿಸಲು ಸಿದ್ಧ. ಜನರ ಸೇವೆಯನ್ನು ಮಾಡುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇನೆ’ ಎಂದರು.

ಶಾಸಕರಾಗಿ ಆಯ್ಕೆಯಾಗಿರುವ ಕೆ.ರಘುಪತಿ ಭಟ್‌ ಅವರ ಅಭಿವೃದ್ಧಿ ಕೆಲಸಗಳಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ. ಚುನಾವಣಾ ಪೂರ್ವ ನೀಡಿರುವ ಎಲ್ಲ ಬೇಡಿಕೆಯನ್ನು ಈಡೇರಿಸಬೇಕು. ಜೂನ್‌ 20ರೊಳಗೆ ಜಿಲ್ಲೆಯಲ್ಲಿನ ಮರಳು ಸಮಸ್ಯೆ ಪರಿಹರಿಸುವುದಾಗಿ ನೀಡಿದ ಭರವಸೆ ಶೀಘ್ರದಲ್ಲಿ ಈಡೇರಬೇಕು ಎಂದರು.

ಮುಖಂಡರಾದ ಜನಾರ್ದನ ಭಂಡರ್ಕರ್, ಜನಾರ್ದನ್‌ ತೋನ್ಸೆ, ಹರೀಶ್‌ ಕಿಣಿ, ಸತೀಶ್ ಅಮಿನ್‌, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ. ನರಸಿಂಹ ಮೂರ್ತಿ, ಯತೀಶ್‌ ಕರ್ಕೇರ ಇದ್ದರು.

ಒಳ್ಳೆಯತನವನ್ನು ದುರುಪಯೋಗ ಸಲ್ಲದು

‘ಕಾಂಗ್ರೆಸ್‌ ಪಕ್ಷ ಆಡಳಿತ ಅವಧಿಯಲ್ಲಿ ಜಿಲ್ಲೆಯ ಬಿಜೆಪಿಯ ಕಾರ್ಯಕರ್ತರನ ಮೇಲೆ ದೌಜನ್ಯ ನಡೆಸಿಲ್ಲ. ನಮ್ಮ ಒಳ್ಳೆಯತನವನ್ನು ದೌರ್ಬಲ್ಯ ಅಂತ ತಿಳಿದು ಹಲ್ಲೆ ನಡೆಸಿದರೆ ನಾವು ಸುಮ್ಮನೆ ಕೂರುವುದಿಲ್ಲ. ಮುಂದಿನ ದಿನದಲ್ಲಿ ಘಟನೆ ನಡೆದರೆ ಪೊಲೀಸ್‌ ಠಾಣೆಗೆ ಸ್ವತಃ ನಾನೇ ದೂರು ನೀಡುತ್ತೇನೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಹೋದರೆ ಧರಣಿ ಮಾಡುವೆ’ ಎಂದು ಪ್ರಮೋದ್‌ ಮಧ್ವರಾಜ್ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.