ADVERTISEMENT

ಸುಸಜ್ಜಿತ ಕ್ರೀಡಾಂಗಣ: ಸಚಿವ ಅಪ್ಪಚ್ಚು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 8:55 IST
Last Updated 16 ಅಕ್ಟೋಬರ್ 2012, 8:55 IST

ಕುಂದಾಪುರ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ಪ್ರತಿ ಜಿಲ್ಲೆಯಲ್ಲಿ ಕ್ರೀಡಾ ಶಾಲೆಯನ್ನು ವ್ಯವಸ್ಥಿತವಾಗಿ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಕುಂದಾಪುರ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಳಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಈ ಕುರಿತು ಯೋಜನೆ ರೂಪಿಸಲಾಗಿದೆ. ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಿ ಆಯಾ ಜಿಲ್ಲೆಗೆ ಸಂಬಂಧಿಸಿ ಯೋಜನೆ ರೂಪಿಸಲಾಗುತ್ತದೆ. ಕ್ರೀಡೆಗೂ ಮಾನ್ಯತೆ ದೊರಕಿಸುವ ಹಿನ್ನೆಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಉದ್ದೇಶವೂ ಸರ್ಕಾರಕ್ಕೆ ಇದೆ ಎಂದು ತಿಳಿಸಿದರು.

ರಾಜ್ಯದ 10ಸಾವಿರ ಕ್ರೀಡಾಳುಗಳಿಗೆ ಕ್ರೀಡಾ ಸಂಜೀವಿನಿ ಎಂಬ ನೂತನ ವಿಮಾ ಪಾಲಿಸಿಯನ್ನು ಜಾರಿಗೆ ತರಲಾಗುತ್ತದೆ ಎಂದರು. ಗ್ರಾ.ಪಂ. ಸಂಗ್ರಹಿಸುವ ತೆರಿಗೆಗಳಲ್ಲಿಯೂ ಶೇ. 2ನ್ನು ಕ್ರೀಡಾ ಸೆಸ್ ಆಗಿ ಉಪಯೋಗಿಸಲು ತೀರ್ಮಾನಿಸಿದ್ದು, ಜಿಲ್ಲಾಧಿಕಾರಿಯವರ ನೇತೃತ್ವದ ಖಾತೆಗೆ ಜಮಾ ಮಾಡಲಾಗುತ್ತದೆ. ಅಲ್ಲದೇ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವ ಅಂಗಡಿಗಳ ಬಾಡಿಗೆಯನ್ನೂ ಸಂಪೂರ್ಣವಾಗಿ ಕ್ರೀಡೆಗೆ ವಿನಿಯೋಗಿಸುವ ಬಗ್ಗೆಯೂ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ದೊರೆಯಲಿದೆ ಎಂದರು.

ಯಡಿಯೂರಪ್ಪ ಪಕ್ಷ ಬಿಡಲ್ಲ: ಯಾವುದೇ ಸಂದರ್ಭದಲ್ಲಿಯೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದರು. ಹಟ್ಟಿಯಂಗಡಿ ಸಿದ್ಧಿನಾಯಕ ದೇವಸ್ಥಾನದ ಧರ್ಮದರ್ಶಿ ರಾಮಚಂದ್ರ ಭಟ್, ಬಾಲಚಂದ್ರ ಭಟ್ ಸಚಿವರನ್ನು ಬರಮಾಡಿಕೊಂಡರು. ಸಚಿವರ ಪತ್ನಿ ಶೈಲಾ, ಪುತ್ರಿ ಪಾರ್ವತಿ, ಸಚಿವರ ಆಪ್ತ ಕಾರ್ಯದರ್ಶಿ ಪಿ.ಕೆ.ಸುಬ್ಬಯ್ಯ ಹಾಗೂ  ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಆನೆಗುಡ್ಡೆ ದೇವರ ದರ್ಶನ ಪಡೆದು ಬಂದ ಸಚಿವರ ಕುಟುಂಬ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಮಂಗಳವಾರ ನಡೆಯಲಿರುವ ಚಂಡಿಕಾ ಹೋಮದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.