ADVERTISEMENT

ಹಾರುಬೂದಿಗೆ ಸೂಕ್ತ ವ್ಯವಸ್ಥೆ: ಯುಪಿಸಿಎಲ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 7:10 IST
Last Updated 28 ಫೆಬ್ರುವರಿ 2011, 7:10 IST

ಉಡುಪಿ: ಹಾರುಬೂದಿ ಸಮಸ್ಯೆ ಸೇರಿದಂತೆ ಯುಪಿಸಿಎಲ್ ಯೋಜನೆಯಿಂದಾಗುತ್ತಿರುವ ತೊಂದರೆಗಳ ಕುರಿತಂತೆ ಕೆಲವು ದಿನಗಳಿಂದ ಆ ಪರಿಸರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಎಚ್ಚೆತ್ತುಕೊಂಡ ಕಂಪೆನಿ, ತಾನು ಕೈಗೊಂಡ ಸುರಕ್ಷತಾ ಕ್ರಮಗಳ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ರವಾನಿಸಿದೆ.ಒಟ್ಟು 1200 ಮೆ.ವಾ. ವಿದ್ಯುತ್ ಉತ್ಪಾದನೆ ಗುರಿ ಹೊಂದಿರುವ ಯುಪಿಸಿಎಲ್ ಮೊದಲ ಹಂತದಲ್ಲಿ ಈಗಾಗಲೇ 600 ಮೆ.ವಾ. ವಿದ್ಯುತ್ ಉತ್ಪಾದನೆ ಆರಂಭಿಸಿದೆ. 2ನೇ ಹಂತದಲ್ಲಿ ಮತ್ತೆ 600 ಮೆ.ವಾ. ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಹೇಳಿದೆ.

ಆದರೆ ಇದಕ್ಕೆ ಸಂಬಂಧಪಟ್ಟಂತೆ ಪರಿಸರಕ್ಕೆ ತೊಂದರೆಯಾಗದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ. ಕಲ್ಲಿದ್ದಲು ಉರಿಸಿ ಹೊರಬೀಳುವ ಬೂದಿ ವಿಸರ್ಜನೆಗೆ ಸಾಂತೂರು ಬಳಿ ಕೆರೆಯನ್ನೇ ಬಳಸಿ ಕಾಂಕ್ರಿಟ್ ಹೊಂಡ ನಿರ್ಮಿಸಿ ಪೈಪ್ ಮೂಲಕ ಬೂದಿ ಸುರಿಯಲಾಗುತ್ತಿದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ. ಪ್ಲಾಂಟ್‌ನ ಚಿಮಣಿ ಎತ್ತರ 275 ಮೀ. ಇದ್ದು ಯಾವುದೇ ಹೊಗೆ ಹರಡುವುದಿಲ್ಲ ಎಂದೂ ಹೇಳಿಕೊಂಡಿದೆ.

ಸ್ಲರಿ ರೂಪದಲ್ಲಿ ಹೊಂಡಕ್ಕೆ ಬಿಡುವ ವ್ಯವಸ್ಥೆ ಮಾಡುವ ಮೂಲಕ ಬೂದಿ ಹಾರದಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೆ, ಬೂದಿ ಬಳಸಿಕೊಳ್ಳುವ ಬಗ್ಗೆ ಎಸಿಸಿ ಸಿಮೆಂಟ್ ಕಂಪೆನಿ ಜತೆ ಒಪ್ಪಂದವಾಗಿದ್ದು, ಅಲ್ಲಿಂದ ಸ್ವಲ್ಪ ಬೂದಿಯನ್ನು ಕೊಂಡೊಯ್ದಿದೆ. ಮುಂದಿನ ದಿನಗಳಲ್ಲಿ ಹಾರುಬೂದಿ ಹಾಕುವ ಹೊಂಡದ ಸುತ್ತಲ ರಸ್ತೆ ಬಂದ್ ಮಾಡಿ ಹೊರವಲಯದಿಂದ ರಸ್ತೆ ಹಾದು ಹೋಗುವಂತೆ ಮಾಡಲಾಗುತ್ತದೆ. ಪೂರ್ಣ ನಿಷೇಧಿತ ವಲಯವಾಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಾರುಬೂದಿಯನ್ನು ಸಮುದ್ರಕ್ಕಾಗಲಿ ಬಿಡುತ್ತಿಲ್ಲ. ಅಲ್ಲದೇ ಪೈಪ್‌ಲೈನ್ ಆಗುತ್ತಿರುವ ಸೋರಿಕೆಯನ್ನು ಕೂಡ ತಡೆಗಟ್ಟಲಾಗುತ್ತಿದೆ ಎಂದು ಯುಪಿಸಿಎಲ್ ಪ್ರಕಟಣೆ ತಿಳಿಸಿದೆ. 
ಆದರೆ ಇಷ್ಟು ದಿನ ಹೊಂಡದಿಂದ ಸುತ್ತಲ ಪರಿಸರಕ್ಕೆ  ಹಾರುಬೂದಿಯಿಂದಾಗಿ  ಸಮಸ್ಯೆ ಆಗುತ್ತಿರುವ  ಬಗ್ಗೆ ಪರಿಸರ ತಜ್ಞರು, ಸ್ವಾಮೀಜಿಗಳು, ಸಾರ್ವಜನಿಕರು, ವಿರೋಧಪಕ್ಷದ ಮುಖಂಡರು ಪ್ರತಿಭಟನೆ, ಪಾದಯಾತ್ರೆ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.