ADVERTISEMENT

ಹಿಂದುಳಿದವರ ಉನ್ನತೀಕರಣಕ್ಕೆ ಸರ್ಕಾರ ಬದ್ಧ: ಆಚಾರ್ಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2011, 11:20 IST
Last Updated 16 ಆಗಸ್ಟ್ 2011, 11:20 IST
ಹಿಂದುಳಿದವರ ಉನ್ನತೀಕರಣಕ್ಕೆ ಸರ್ಕಾರ ಬದ್ಧ: ಆಚಾರ್ಯ
ಹಿಂದುಳಿದವರ ಉನ್ನತೀಕರಣಕ್ಕೆ ಸರ್ಕಾರ ಬದ್ಧ: ಆಚಾರ್ಯ   

ಉಡುಪಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ವರ್ಷಕ್ಕಿಂತ ಈ ವರ್ಷ 2 ಸಾವಿರ ಕೋಟಿ ರೂಪಾಯಿಯಷ್ಟು ಹೆಚ್ಚಿನ ಅನುದಾನ ನೀಡಿದೆ ಎಂದು ಸಚಿವ ವಿ.ಎಸ್.ಆಚಾರ್ಯ ಇಲ್ಲಿ ತಿಳಿಸಿದರು.

ಆದಿ ಉಡುಪಿಯಲ್ಲಿ ಐಟಿಡಿಪಿ ಮತ್ತು ನಗರಸಭೆ ಅನುದಾನದಲ್ಲಿ ರೂ. 33 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ನೂತನ ವಿದ್ಯಾರ್ಥಿನಿಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ಯಾವತ್ತಿಗೂ ಬದ್ಧವಾಗಿದೆ ಎಂದು ಹೇಳಿದ ಆಚಾರ್ಯ, ಶಿಕ್ಷಣ, ಮೂಲಸೌಕರ್ಯ, ಮನೆ ನಿರ್ಮಾಣ ಸೇರಿದಂತೆ ಹತ್ತಾರು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿರುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರು.

ಯಾವುದೇ ಸಮುದಾಯಕ್ಕಾದರೂ ಶಿಕ್ಷಣ ಬಹಳ ಮುಖ್ಯ. ಶಿಕ್ಷಣವೊಂದಿದ್ದರೆ ಬದುಕಿನಲ್ಲಿ ಸಾಕಷ್ಟು ಉನ್ನತ ಹುದ್ದೆಯನ್ನು ಅಲಂಕರಿಸಬಹುದು. ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಅವರಿಗೆ ಹಾಸ್ಟೆಲ್ ಸೌಲಭ್ಯ, ಅಗತ್ಯವಿರುವಲ್ಲಿ ಶಾಲಾ ಕಾಲೇಜು ಸ್ಥಾಪಿಸಿ, ವಿದ್ಯಾರ್ಥಿವೇತನ ನೀಡಿ ಉತ್ತೇಜನ ನೀಡಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗರ ಅಭಿವೃದ್ಧಿಗಾಗಿ ಸರ್ಕಾರ ಇದೇ ವರ್ಷದಲ್ಲಿ ಹಲವು ಕಾರ್ಯಕ್ರಮ ರೂಪಿಸಿ ಅವರಿಗೆ ನೆರವಾಗಿದೆ. ನಿರುದ್ಯೋಗಿ ಯುವ ಅರ್ಹರಿಗೆ ರಿಕ್ಷಾ ನೀಡಿಕೆ, ಸಹಾಯಧನದಲ್ಲಿ ಟಾಟಾ ಇಂಡಿಕಾ ಕಾರ್ ನೀಡಿಕೆ, ಮನೆ ನೀಡುವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಆರೋಗ್ಯ ಮತ್ತು ಶಿಕ್ಷಣದಲ್ಲಿ ಉಡುಪಿ ಜಿಲ್ಲೆ ಮುಂದಿದೆ ಎನ್ನುವುದು ಕೇವಲ ಅಂಕಿ ಅಂಶದಲ್ಲಿಯಷ್ಟೇ ಆಗಬಾರದು, ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೇವೆ ಸಿಗುವಂತಾಗಬೇಕು ಎಂದು ಆಚಾರ್ಯ ಹೇಳಿದರು.
ಇದೇ ಸಂದರ್ಭದಲ್ಲಿ ಕೊರಗ ಫಲಾನುಭವಿಗಳಿಗೆ ವಸತಿ ಸೌಲಭ್ಯದ ಚೆಕ್ ಅನ್ನು ಸಚಿವರು ವಿತರಿಸಿದರು.

ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉಪೇಂದ್ರ ನಾಯಕ್, ನಗರಸಭೆ ಅಧ್ಯಕ್ಷ ಕಿರಣ್‌ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಸದಸ್ಯ ರವಿ ಅಮೀನ್, ಜಿಲ್ಲಾಧಿಕಾರಿ ಎಂ.ಟಿ.ರೇಜು, ಸಿಇಒ ಪ್ರಭಾಕರ ಶರ್ಮ, ನಗರಸಭೆ ಆಯುಕ್ತ ಗೋಕುಲದಾಸ್ ನಾಯಕ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಿ.ಊರ್ಮಿಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.