ADVERTISEMENT

ಹುರುಳಿಲ್ಲದ ಪ್ರಧಾನಿ ಮೋದಿ ಭಾಷಣ

ಸರ್ಕಾರ ಮುಖ್ಯ ಸಚೇತಕ ಐವನ್‌ ಡಿಸೋಜ

​ಪ್ರಜಾವಾಣಿ ವಾರ್ತೆ
Published 9 ಮೇ 2018, 11:40 IST
Last Updated 9 ಮೇ 2018, 11:40 IST

ಕುಂದಾಪುರ:  ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ನಾಯಕರು ಸಿದ್ದ ಪಡಿಸಿದ ಭಾಷಣ ಮಂಡಿಸುವ ಕೆಲವನ್ನಷ್ಟೇ ಮಾಡುತ್ತಿದ್ದಾರೆ. ಅಭಿವೃದ್ಧಿ ಚಿಂತನೆ ಇಲ್ಲದ ಇವರ ಭಾಷಣಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸರ್ಕಾರದ ಮುಖ್ಯ ಸಚೇತಕ ಐವನ್‌ ಡಿಸೋಜ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

4 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಮೋದಿ ನೇತೃತ್ವದ ಅಭಿವೃದ್ಧಿ ಕಾರ್ಯಕ್ರಮ ಏನು ಎಂಬುದನ್ನು ಜನರ ಮುಂದಿಡಲು ಮೋದಿ ಹಿಂಜರಿಯುತ್ತಿದ್ದಾರೆ. ಯಾವುದೇ ನಿರ್ದಿಷ್ಟ ಅಜೆಂಡಾ ಅವರ ಭಾಷಣದಲ್ಲಿ ಇಲ್ಲ. ವಿನಾಕಾರಣ ಆರೋಪ ಮಾಡುವುದೇ ಅವರ ಭಾಷಣದ ಗುರಿ. ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಸ್ಥಳೀಯ ನಾಯಕರೇ ಇಲ್ಲ. ಮೋದಿ ಹಾಗೂ ಶಾ ಅವರನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಸ್ಥಳೀಯ ನಾಯಕರು ಅವರು ಹೇಳುವ ಸುಳ್ಳಿನ ಸರಮಾಲೆ ನಂಬುತ್ತಿದ್ದಾರೆ.  ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಆಗಿ ಬಿಂಬಿಸುವುದರಿಂದ ಪಕ್ಷಕ್ಕೆ ಪ್ರಯೋಜವಿಲ್ಲ ಎಂದು ಚಿಂತನೆ ನಡೆಸಿದ ಮೋದಿ ಹಾಗೂ ಶಾ ಜೋಡಿ ಇದೀಗ ಬಳ್ಳಾರಿ ರೆಡ್ಡಿ ಬ್ರದರ್ಸ್‌ ಅವರನ್ನು ಅಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಕಾನೂನು ವ್ಯವಸ್ಥೆ ಸೇರಿದಂತೆ ಎಲ್ಲವೂ ಸರಿ ಇಲ್ಲ ಎನ್ನುವ ಅಪಾದನೆ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಇಷ್ಟು ದಿನ ಏನು ಮಾಡುತ್ತಾ ಇತ್ತು ಎನ್ನುವುದನ್ನು ಜನರಿಗೆ ತಿಳಿಸಬೇಕು ಎಂದರು.

ADVERTISEMENT

ಗೋ ಹತ್ಯೆ ನಿಷೇಧ ಕಾಯಿದೆ, ಕೋಮವಾದಿ ಸಂಘಟನೆಗಳ ನಿಷೇಧ ಸೇರಿದಂತೆ ಬಿಜೆಪಿ ಒತ್ತಾಯ ಮಾಡುತ್ತಿರುವ ಹಲವು ವಿಚಾರಗಳನ್ನು ಕೇಂದ್ರ ಸರ್ಕಾರ ಏಕ ಪಕ್ಷೀಯವಾಗಿ ಜಾರಿಗೆ ತರುವ ಅವಕಾಶಗಳಿದ್ದರೂ, ಮುಂದಾಗದೆ ಇರುವ ಕುರಿತು ಕಾರಣಗಳನ್ನು ದೇಶದ ಜನರ ಮುಂದಿಡಲಿ. ಸಮುದಾಯ ಎತ್ತಿ ಕಟ್ಟಿ ಬೆಂಕಿ ಹಚ್ಚುವ ಕೆಲಸ ಕರಾವಳಿಯಲ್ಲಿ ಈ ಬಾರಿ ನಡೆಯುವುದಿಲ್ಲ. ಜೆಡಿಎಸ್‌ ಕೂಡ ಇದಕ್ಕೆ ಹೊರತಾಗಿಲ್ಲ ಪಕ್ಷದ ಹೆಸರಿನಲ್ಲಿ ಜಾತ್ಯತೀತ ಎನ್ನುವ ಈ ಪಕ್ಷ ಕ್ರೈಸ್ತರಿಗೆ ಒಂದೇ ಒಂದು ಸ್ಥಾನ ನೀಡಿಲ್ಲ ಎಂದರು.

ವರಾಹಿ ಯೋಜನೆಗೆ ಹೆಚ್ಚು ಅನುದಾನ ನೀಡಿರುವ ಕಾಂಗ್ರೆಸ್‌ ಪಕ್ಷ ಯೋಜನೆ ಕಾಲ ಮಿತಿಯಲ್ಲಿ ಪೂರ್ಣಗೊಳಿಸಲು ಬದ್ದತೆ ತೋರಲಿದೆ. ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಾಮಕ್ಕಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆದಿರುವುದು ಖಂಡನೀಯ. ಈ ರೀತಿ ದಬ್ಬಾಳಿಕೆ ಮನೋಭಾವ ಒಳ್ಳೆಯದಲ್ಲ. ಪೊಲೀಸ್‌ ಇಲಾಖೆ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವೆರೋನಿಕಾ ಕರ್ನೋಲಿಯಾ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಸನ್ನಕುಮಾರ ಜೈನ್‌, ವಿನೋದ ಕ್ರಾಸ್ತಾ, ಜೇರಾಲ್ಡ್‌ ಕ್ರಾಸ್ತಾ, ಜೋನ್ಸ್‌ನ್‌ ಡಿ ಆಲ್ಮೇಡಾ ಇದ್ದರು.

**
ಪ್ರಮಾಣ ವಚನ ದಿನಾಂಕ ಪದೆ ಪದೆ ಹೇಳುತ್ತಿರುವ ಬಿ.ಎಸ್‌.ಯಡಿಯೂರಪ್ಪನವರ ಮಾತಿನ ವರಸೆ ನೋಡಿದರೆ ಮತ ಯಂತ್ರಗಳು ಇವರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿವೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಸದಾನಂದ ಗೌಡ ಅವರ ಜೇಬಿನಲ್ಲಿ ರಾಜ್ಯ ಮತ ಇವೇಯೆ
– ಐವನ್‌ ಡಿಸೋಜ, ವಿಧಾನ ಪರಿಷತ್‌ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.