ADVERTISEMENT

ಹೆಜಮಾಡಿ: ಸಿ.ಎಂ.ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:50 IST
Last Updated 17 ಮಾರ್ಚ್ 2012, 9:50 IST

ಹೆಜಮಾಡಿ (ಪಡುಬಿದ್ರಿ): ಉಡುಪಿ-ಚಿಕ್ಕಮಗಳೂರು ಉಪಚುನಾವಣೆ ಹಿನ್ನೆಲೆಯಲ್ಲಿ ಹೆಜಮಾಡಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಸನ್ಮಾನಿಸಲಾಯಿತು.

ಮುಖ್ಯಮಂತ್ರಿ ಆದ ಬಳಿಕ ಇದೇ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳಿಯ ಕೋಡಿ ಕ್ರಿಕೆಟರ್ಸ್‌ ವತಿಯಿಂದ ಮುಖ್ಯಮಂತ್ರಿ ಅವರನ್ನು ಪ್ರಚಾರ ಸಭೆಯಲ್ಲೇ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಸಂಘಟಕರು ವೇದಿಕೆಯಲ್ಲಿ ಅಭಿನಂದನಾ ಸಮಾರಂಭದ ಬೃಹತ್ ಕಟೌಟ್ ಹಾಕಿದ್ದರು. ಬೆಳಿಗ್ಗೆ ಅಲ್ಲಿಗೆ ಆಗಮಿಸಿದ ಚುನಾವಣಾ ವೀಕ್ಷಕರು ಅಭಿನಂದನಾ ಸಮಾರಂಭದ ಬ್ಯಾನರ್ ಕಂಡು ತೆರವುಗೊಳಿಸುವಂತೆ ಪಡುಬಿದ್ರಿ ಪೊಲೀಸರಿಗೆ ಸೂಚಿಸಿದ್ದರು. ಮುಖ್ಯಮಂತ್ರಿ ಅವರನ್ನು ಸನ್ಮಾನಿಸಬಾರದು ಎಂದೂ ಹೇಳಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿನಂದನಾ ಸಮಾರಂಭದ ಬ್ಯಾನರ್ ತೆರವುಗೊಳಿಸಲು ಸಂಘಕರಿಗೆ ಸೂಚಿಸಿದರು. ಆ ಬಳಿಕ ಚುನಾವಣಾ ಪ್ರಚಾರದ ಬ್ಯಾನರ್ ಅಳವಡಿಸಲಾಯಿತು.

ಕಾರ್ಯಕ್ರಮದಲ್ಲಿ ಸನ್ಮಾನ ರದ್ದುಗೊಳಿಸಲಾಗಿತ್ತು. ಆದರೂ ಕೊನೆ ಕ್ಷಣದಲ್ಲಿ ಸಂಘಟಕರು ಶಾಸಕರ ಉಸ್ತುವಾರಿಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ, ಬೃಹತ್ ಹೂವಿನ ಹಾರ ಹಾಕಿ ಸನ್ಮಾನಿಸಿದರು. ಬಳಿಕ ಅಲ್ಲಿ ಸೇರಿದ್ದ ಕಾರ್ಯಕರ್ತರು, ವಿವಿಧ ಸಂಘಟನೆಯವರು ಹಾರ ಹಾಕಿ ಅಭಿನಂದಿಸಿದರು.

ಮನವಿ: ಹೆಜಮಾಡಿ ಕಿರು ಮೀನುಗಾರಿಕಾ ಬಂದರಿಗೆ ಬ್ರೇಕ್ ವಾಟರ್ ನಿರ್ಮಾಣ, ಸಿಆರ್‌ಝೆಡ್ ನಿಯಂತ್ರಣ ವಲಯವನ್ನು 50 ಮೀಟರ್‌ಗೆ ಕಡಿತ, ಮೊಗವೀರರ ಏಕೈಕ ಪ್ರತಿನಿಧಿ ಲಾಲಾಜಿ ಮೆಂಡನ್‌ಗೆ ಮಂತ್ರಿ ಪದವಿ ಮೊದಲಾದ  ಬೇಡಿಕೆ ಇದ್ದ ಮನವಿಯನ್ನು ಕೋಡಿ ಕ್ರಿಕೆಟರ್ಸ್‌ ನೇತೃತ್ವದಲ್ಲಿ ಸ್ಥಳಿಯ ಸಂಘ ಸಂಸ್ಥೆಗಳು ಮುಖ್ಯಮಂತ್ರಿ ಅವರಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.