ADVERTISEMENT

‘ಹ್ಯಾಲೋಜಿನ್ ಬಳಸಿ ಮೀನುಗಾರಿಕೆ ಬೇಡ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:57 IST
Last Updated 20 ಡಿಸೆಂಬರ್ 2017, 5:57 IST

ಉಡುಪಿ: ಹಾಲೋಜಿನ್ ದೀಪ ಬಳಸಿ ಆಳ ಸಮುದ್ರ ಮೀನುಗಾರಿಕೆ ಮಾಡುವುದರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮೀನುಗಾರಿಕೆ ಸ್ಥಗಿತಗೊಳಿಸಿ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಫಿಶರ್‌ಮನ್ಸ್ ಡೀಪ್ ಸೀ ಟ್ರಾಲ್‌ ಬೋಟ್‌ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕಿಶೋರ್‌ದಾಸ್ ಸುವರ್ಣ, ದೀಪ ಬಳಸಿ ಅನೈಸರ್ಗಿಕವಾಗಿ ಮೀನುಗಾರಿಕೆ ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ, ರಾಜ್ಯ ಸರ್ಕಾರವೂ ಇದಕ್ಕೆ ನಿಷೇಧ ಹೇರಿದೆ. ಪಕ್ಕದ ರಾಜ್ಯಗಳಾದ ಗೋವಾ, ಕೇರಳ ಮಹಾರಾಷ್ಟ್ರಗಳಲ್ಲಿಯೂ ಇದರ ವಿರುದ್ಧ ಅಲ್ಲಿನ ಸರ್ಕಾರಗಳು ಕ್ರಮ ಕೈಗೊಂಡಿವೆ ಎಂದರು.

ರಾಜ್ಯದ ಆದೇಶವನ್ನು ಪಾಲನೆ ಮಾಡದಂತೆ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರೇ ಕೋಸ್ಟ್ ಗಾರ್ಡ್‌ ಹಾಗೂ ಸಂಬಂಧಿಸಿದ ಇಲಾಖೆಯ ಮೇಲೆ ಒತ್ತಡ ಹೇರಿದ್ದಾರೆ. ಪರಿಣಾಮ ದೀಪ ಬಳಸಿ ಮೀನುಗಾರಿಕೆ ಮಾಡುವುದು ಅವ್ಯಾಹತವಾಗಿ ನಡೆದಿದೆ. ಈ ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಲ್ಲಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಡಿಸೆಂಬರ್ 20ರಂದು ನಡೆಯುವ ಸಂಘದ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಮಲ್ಪೆಯಲ್ಲಿ 4,500ಕ್ಕೂ ಹೆಚ್ಚು ಯಾಂತ್ರೀಕೃತ ದೋಣಿಗಳಿವೆ. 8,500ಕ್ಕೂ ಹೆಚ್ಚಿನ ನಾಡದೋಣಿಗಳಿವೆ. ಆಳ ಸಮುದ್ರ ಮೀನುಗಾರಿಕೆ ಮಾಡುವ 148 ನೋಂದಾಯಿತ ಪರ್ಸಿನ್ ದೋಣಿಗಳಿವೆ. ಆದರೆ ಸುಮಾರು 700 ಅನಧಿಕೃತ ದೋಣಿಗಳು ಸಹ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದು ದೀಪ ಬಳಸಿ ಮೀನುಗಾರಿಕೆ ಮಾಡುತ್ತಿವೆ.

ಈ ರೀತಿ ಮೀನುಗಾರಿಕೆ ಮಾಡುವುದರಿಂದ ಮೀನಿನ ಸಂತತಿ ನಾಶವಾಗಿ ಮತ್ಸ್ಯ ಕ್ಷಾಮ ತಲೆದೋರುತ್ತದೆ. ಈಗಾಗಲೇ ಕಳೆದ ಕೆಲವು ವರ್ಷಗಳಿಂದ ಮೀನಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾಲ ಮಾಡಿ ದೋಣಿ ಖರೀದಿಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಟ್ರಾಲ್‌ ಬೋಟ್‌ ಮೀನುಗಾರಿಕೆಯಿಂದ ನಷ್ಟವಾಗುತ್ತದೆ ಎಂದು ತಿಳಿದ ತಕ್ಷಣ ಸ್ವ ಇಚ್ಛೆಯಿಂದ ಅದನ್ನು ತ್ಯಜಿಸುವ ನಿರ್ಧಾರವನ್ನು ಸಂಘ ಮಾಡಿದೆ ಎಂದು ಹೇಳಿದರು.

ಇದರಲ್ಲಿ ಪಕ್ಷ ರಾಜಕೀಯ ಇದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೀನುಗಾರರು ಹೆಚ್ಚಾಗಿರುವ ಭಾಗದಲ್ಲಿ ಅವರಿಗೆ ಮತಗಳು ಕಡಿಮೆ ಬಂದಿತ್ತು. ಅದೂ ಸಹ ಒಂದು ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಈಗಾಗಲೇ ಈ ಬಗ್ಗೆ ಮನವಿ ಮಾಡಲಾಗಿದೆ. ಆದರೆ ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಸಂಪರ್ಕಿಸದೆ ಆದೇಶ ಹೊರಡಿಸಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಅಲ್ಲದೆ ಅಕ್ರಮ ಮೀನುಗಾರರ ಮೇಲೆ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎರಡೂ ಕಡೆಯವರನ್ನು ಕರೆದು ರಾಜಿ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಆಳ ಸಮುದ್ರ ಮೀನುಗಾರರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಹೇಳಿದರು. ಮುಖಂಡರಾದ ವಿಠಲ್ ಕರ್ಕೇರ, ಕರುಣಾಕರ್‌ ಸಾಲಿಯಾನ್ ಇದ್ದರು.

ದೀಪ ಬಳಸಿ ಮೀನುಗಾರಿಕೆ ಹೇಗೆ

25 ಕೆ.ವಿ ಜನರೇಟರ್ ಅನ್ನು ದೋಣಿಗೆ ಹೊರಮುಖವಾಗಿ ಅಳವಡಿಸಿ 1700ಕ್ಕೂ ಅಧಿಕ ಹೈ ವೋಲ್ಟೇಜಿನ ಹ್ಯಾಲೋಜಿನ್‌ ಬಲ್ಬ್‌ ಹಾಕಲಾಗುತ್ತದೆ. ಸುರಕ್ಷಿಣ ಸ್ಥಳವಾದ ಭರಂ (ಬಂಡೆಗಳು) ಕೆಳಗೆ ಮೀನುಗಳು ಮೊಟ್ಟೆ ಇಡುತ್ತವೆ. ಅಂತಹ ಸ್ಥಳಗಳಲ್ಲಿ 3ರಿಂದ 5 ಗಂಟೆಗಳ ಕಾಲ ದೋಣಿಯನ್ನು ನಿಲ್ಲಿಸಲಾಗುತ್ತದೆ. ಬೆಳಕಿನ ಆಕರ್ಷಣೆಗೆ ಮೀನುಗಳು ಬಂದಾಗ ಬಲೆ ಹಾಕಿ ಹಿಡಿಯಲಾಗುತ್ತದೆ ಎಂದು ಕಿಶೋರ್‌ ದಾಸ್ ಸುವರ್ಣ ಹೇಳಿದರು.

* * 

ಸಚಿವರ ಬೆಂಬಲ ಇರುವುದರಿಂದ ಮಲ್ಪೆಯಲ್ಲಿ ಪಚ್ಚಿಲೆ ಮೀನುಗಾರಿಕೆ ಸಹ ಅವ್ಯಾಹತವಾಗಿ ನಡೆಯುತ್ತಿದೆ.
ರವಿರಾಜ್ ಸುವರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.