ADVERTISEMENT

‘ಅಸಮಾನತೆಯೇ ಸಮಕಾಲೀನ ಸವಾಲು’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 6:57 IST
Last Updated 24 ಡಿಸೆಂಬರ್ 2013, 6:57 IST

ಉಡುಪಿ: ‘ಅಸಮಾನತೆ ಸ್ವಾತಂತ್ರ್ಯೋತ್ತರ ಭಾರತದ ಸಮಕಾಲೀನ ಪ್ರಮುಖ ಸವಾಲು’ ಎಂದು ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ. ವಲೇರಿಯನ್‌ ರೋಡ್ರಿಗಸ್‌ ಅಭಿಪ್ರಾಯಪಟ್ಟರು.

ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಪ್ರಾಯೋಜಿತ ‘ಸಮಕಾಲೀನ ವಿಷಯಗಳು ಕಾಳಜಿ ಮತ್ತು ಸವಾಲು’ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಮಾತನಾಡಿದರು.

ವಿವಿಧತೆಯೇ ಪ್ರಮುಖ ಲಕ್ಷಣವಾಗಿರುವ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ17ರಷ್ಟು ಜನ ಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಅಸಮಾನತೆಯೇ ಬಹುಮುಖ್ಯ ಸವಾಲಾಗಿದೆ. ಜಾತಿ ವ್ಯವಸ್ಥೆ ಕ್ರಮೇಣ ಶಿಥಿಲವಾಗುತ್ತಿದ್ದರೂ ಶ್ರೇಣೀಕೃತ ವ್ಯವಸ್ಥೆ ಕಡಿಮೆಯಾಗುತ್ತಿಲ್ಲ ಎಂದು ಅವರು ಹೇಳಿದರು.

ನಮ್ಮದು ಸಂಸದೀಯ ಪ್ರಜಾಪ್ರಭುತ್ವವಾಗಿದ್ದು ಇದರ ಕಾರ್ಯಾಚರಣೆಯಲ್ಲಿ ಕೆಲವು ಲೋಪಗಳನ್ನು ಗುರುತಿಸಬಹುದು. ಶೇ50ರಷ್ಟು ಮಹಿಳೆಯರು ದೇಶದಲ್ಲಿ ಇದ್ದರೂ ಸಂಸತ್‌ನಲ್ಲಿ ಅವರ ಪ್ರತಿನಿಧಿತ್ವ ಕಡಿಮೆ ಇದೆ. 15ನೇ ಲೋಕಸಭೆಯಲ್ಲಿ ಶೇ 10.25 ಮಹಿಳಾ ಪ್ರತಿನಿಧಿಗಳು ಇದ್ದರೂ ಅದಕ್ಕಿಂತ ಹಿಂದಿನ ಲೋಕಸಭೆಯಲ್ಲಿ ಶೇ10ಕ್ಕಿಂತ ಕಡಿಮೆ ಇದ್ದದ್ದನ್ನು ಗಮನಿಸಬಹುದು.

ದೇಶದ ಒಟ್ಟು ಜನ ಸಂಖ್ಯೆಯಲ್ಲಿ ಮುಸ್ಲಿಂರ ಪಾಲು ಶೇ13– 14ರಷ್ಟು ಇದ್ದರೂ ಮುಸ್ಲಿಂ ಸಂಸದರ ಸಂಖ್ಯೆ ಪ್ರಸ್ತುತ 4.5ರಷ್ಟಿದೆ. ಮೊದಲ ಮತ್ತು ಎರಡನೇ ಲೋಕಸಭೆಯಲ್ಲಿ ಈ ಪ್ರಮಾಣ ಕೇವಲ ನಾಲ್ಕೂವರೆ ಇತ್ತು. 1981ರಲ್ಲಿ ಮಾತ್ರ ಈ ಪ್ರಮಾಣ 9.1ರಷ್ಟಿತ್ತು, ಈ ಬದಲಾವಣೆಯಲ್ಲಿ ರಾಜಕೀಯ ಕಾರಣಗಳನ್ನು ಗುರುತಿಸಬಹುದು ಎಂದು ಅವರು ಹೇಳಿದರು.

ಮಣಿಪಾಲ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಡಾ. ಜಿ.ಕೆ. ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಪದ್ಮನಾಭ ಭಟ್‌, ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕಿ ಬಿ. ಶ್ವೇತಾ ರಾವ್‌, ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಕಾಲೇಜಿನ ರಿಜಿಸ್ಟ್ರಾರ್‌ ಡಾ. ಎ.ಎಂ. ನರಹರಿ, ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಯು.ಬಿ. ಗುರುದೇವ್‌, ಮಾಜಿ ಸಂಸದೆ ತೇಜಸ್ವಿನಿ ಗೌಡ, ಕುವೆಂಪು ವಿಶ್ವವಿದ್ಯಾಲಯದ ಡಾ. ಜೆ. ಸದಾನಂದ ಉಪಸ್ಥಿತರಿದ್ದರು.

ಬಿ.ಎ ವಿದ್ಯಾರ್ಥಿಗಳಾದ ರಕ್ಷತಾ ನಾಯಕ್‌ ಮತ್ತು ಶೃತಿ ಆಚಾರ್ಯ ಪ್ರಾರ್ಥನೆ ಮಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎನ್‌. ಹಾಲಾ ನಾಯ್ಕ್‌ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಕೆ. ಸುರೇಂದ್ರನಾಥ್‌ ಶೆಟ್ಟಿ ವಂದನಾರ್ಪಣೆ ಮಾಡಿದರು. ಭೌತಶಾಸ್ತ್ರ ವಿಭಾಗದ ರೋಹಿಣಿ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.