ADVERTISEMENT

‘ಜನಪ್ರತಿನಿಧಿಗಳ ಜವಾಬ್ದಾರಿ–ಅರಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 7:01 IST
Last Updated 1 ಮಾರ್ಚ್ 2014, 7:01 IST

ಉಡುಪಿ: ‘ಸಂಸದ ಸೇರಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳೇನು ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಯಾವ ಪ್ರತಿನಿಧಿಯಿಂದ ಏನು ಕೆಲಸ ಆಗಬೇಕು ಎಂಬ ಖಚಿತತೆ ಜನರಿಗೆ ಇರಬೇಕು’ ಎಂದು ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅಭಿಪ್ರಾಯಪಟ್ಟರು.

ಉಡುಪಿ ಪ್ರೆಸ್ ಕ್ಲಬ್‌ ಶುಕ್ರವಾರ ಏರ್ಪಡಿಸಿದ್ದ ‘ಪ್ರಜಾಪ್ರಭುತ್ವ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನಾಭಿಪ್ರಾಯವೆಂದರೆ ಕೇವಲ ಮತ ಪಡೆಯುವುದು ಎಂಬುದಕ್ಕೆ ಸೀಮಿತವಾಗಬಾರದು. ಜನರ ಕರ್ತವ್ಯವೂ ಇಷ್ಟಕ್ಕೆ ಕೊನೆಯಾಗದೆ, ನಿಯಮಿತವಾಗಿ ಒಟ್ಟಾಗಿ ಸೇರುವ ಮೂಲಕ ವಿಷಯಗಳನ್ನು ಪರಸ್ಪರ ಚರ್ಚಿಸುವ ವಾತಾವರಣ ನಿರ್ಮಾಣ ಆಗಬೇಕು.

ಎಲ್ಲ ಜನ ಪ್ರತಿನಿಧಿಗಳ ಜೊತೆ ನೇರ ಸಂಪರ್ಕ ಏರ್ಪಟ್ಟು ಸಂವಾದ ನಡೆಯಬೇಕು. ಸದನದಲ್ಲಿ ಹೆಚ್ಚು ಪ್ರಶ್ನೆ ಕೇಳಲು ಮತ್ತು ಚರ್ಚೆ ನಡೆಸಲು ಜನರು ಪ್ರೇರಣೆ ನೀಡುವಂತಾಗಬೇಕು. ಕಾರ್ಯ­ಕ್ರಮಕ್ಕೆ ಬಂದ­ರಷ್ಟೇ ಸಾಕು ಎಂಬ ಭಾವನೆ ಇರಬಾರದು’ ಎಂದರು.

‘ಗ್ರಾ.ಪಂ., ತಾ.ಪಂ., ಜಿ.ಪಂ., ಶಾಸಕ, ಸಂಸದ ಹೀಗೆ ಎಲ್ಲರ ಕರ್ತವ್ಯಗಳೂ ವಿಕೇಂದ್ರೀಕರಣ­ಗೊಳ್ಳಬೇಕು. ಗ್ರಾ.ಪಂ, ಜಿ.ಪಂ ಸಭೆಗಳಿಗೆ ಶಾಸಕ– ಸಂಸದರು ಹೋಗುವುದು, ಅಧ್ಯಕ್ಷರ ಚುನಾವಣೆ ವೇಳೆ ಮತದಾನ ಮಾಡುವುದು ಸಮಂಜಸವಲ್ಲ ಎಂಬುದು ನನ್ನ ಅಭಿಪ್ರಾಯ. ಹಲವು ಸಕಾರಾತ್ಮಕ ಬದಲಾವಣೆಗಳು ಪ್ರಜಾಪ್ರಭುತ್ವದಲ್ಲಿ ಬರಬೇಕು, ಇಲ್ಲದಿದ್ದರೆ ಆಯ್ಕೆ ಮಾಡುವ ಮೂಲ ಉದ್ದೇಶಕ್ಕೆ ಸೋಲಾಗುವ ಸಾಧ್ಯತೆ ಇರುತ್ತದೆ’ ಎಂದರು.

‘ನಾವು ಪ್ರಶ್ನೆಗಳನ್ನು ಕೇಳಲು ಅನುಮತಿ ಪಡೆದಿದ್ದರೂ ಸಮಯದ ಅಭಾವದಿಂದ ಅದು ಸಾಧ್ಯವಾಗುವುದಿಲ್ಲ. ಅಲ್ಲದೆ ಚೀಟಿ ಎತ್ತುವ ಮೂಲಕ ಪ್ರಶ್ನೆಯನ್ನು ಆಯ್ಕೆ ಮಾಡುವ ವಿಧಾನವೂ ಇದೆ. ಸದನದ ಅವಧಿ ಹೆಚ್ಚಾಗಬೇಕು. ಎಲ್ಲರಿಗೂ ಚರ್ಚೆಯಲ್ಲಿ ಪಾಲ್ಗೊಳ್ಳಲು ಮತ್ತು ಪ್ರಶ್ನೆ ಕೇಳಲು ಅವಕಾಶ ಸಿಗಬೇಕು’ ಎಂದು ಅವರು ಹೇಳಿದರು.

‘ರಾಜ್ಯ ಪಟ್ಟಿ, ಕೇಂದ್ರ ಪಟ್ಟಿ ಮತ್ತು ಸಮವರ್ತಿ ಪಟ್ಟಿಯ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಳ್ಳದಿದ್ದರೆ ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರಲು ಸಾಧ್ಯವಾಗದು’ ಎಂದು ಅವರು ಹೇಳಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್‌ ಮಂಜನಬೈಲ್‌, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಇದ್ದರು. ಸಂಘದ ಕಾರ್ಯದರ್ಶಿ ಜಯಕರ ಸುವರ್ಣ ಸ್ವಾಗತಿಸಿದರು. ಖಜಾಂಚಿ ಉಮೇಶ್‌ ಮಾರ್ಪಳ್ಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.