ADVERTISEMENT

‘ವಿದ್ಯೆಯಿಂದ ಮನುಷ್ಯನ ಉಳಿವು’

ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:19 IST
Last Updated 23 ಸೆಪ್ಟೆಂಬರ್ 2013, 10:19 IST

ಬ್ರಹ್ಮಾವರ: ಅವಿಭಕ್ತ ಕುಟುಂಬದ ಕಾರಣ ಇಂದಿನ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಭಾವ ಕೋಶ ಮತ್ತು ವಿದ್ಯೆಯಿಂದ ಮಾತ್ರ ವ್ಯಕ್ತಿಯ ಮನಸ್ಸು ಸುಂದರವಾಗಲು ಸಾಧ್ಯ ಎಂದು ಉಡುಪಿ ಪೂರ್ಣಪ್ರಜ್ಞ ಮಹಾವಿದ್ಯಾಲಯದ ನಿವೃತ್ತ ಉಪ ನ್ಯಾಸಕ ಡಾ.ಬಿ.ಎಂ. ಸೋಮಯಾಜಿ  ಹೇಳಿದರು.

ಬ್ರಹ್ಮಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರ ಮನೋಭಾವನೆ ಪ್ರತಿಯೊಬ್ಬರಲ್ಲೂ ದೂರವಾಗುತ್ತಿದೆ. ಸುಖ, ಸಂತೋಷ, ಆನಂದ ನೀಡುವ ಪುಸ್ತಕಗಳನ್ನು ಹೆಚ್ಚು ಓದುವುದರಿಂದ ಮನಸ್ಸಿನ ಆರೋಗ್ಯದೊಂದಿಗೆ ಶರೀರವೂ ಆರೋಗ್ಯವಾಗಿರುತ್ತದೆ. ಇಂದಿನ ಬದುಕಿನ ಓಟದಲ್ಲಿ ಮಾತನಾಡಲು ಕಾಲಾವಕಾಶವಿರದ ಕಾರಣ ಜೀವನದ ಅನುಭವ ಮಕ್ಕಳಿಗೆ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಯು ನಾಯಕ್‌ ಶಾಸ್ತ್ರೀಯ ಸ್ಥಾನಮಾನ ದೊರಕಿರುವ ಕನ್ನಡ ಭಾಷೆ ಸಮೃದ್ಧವಾಗಿರುವ ಕಾರಣ 8 ಮಂದಿಗೆ ಜ್ಞಾನಪೀಠ ಪುರಸ್ಕಾರ ಲಭಿಸಿದೆ ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿಯ ಅಧ್ಯಕ್ಷ ಪ್ರೊ.ಡಿ.ಡಿ.ಎಂ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
ಕ.ಸಾ.ಪದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲ್ಲೂಕು ಅಧ್ಯಕ್ಷ ಪ್ರೊ.ಸಿ ಉಪೇಂದ್ರ ಸೋಮಯಾಜಿ, ಚುಟುಕು ಸಾಹಿತ್ಯ ಪರಿಷತ್ತಿನ ಉಪಾ ಧ್ಯಕ್ಷ ರಾಜು ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಮೇಟಿ ಮುದಿಯಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ನೀಲಾವರ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಚುಟುಕು ಸಾಹಿತ್ಯ ಕವಿಗೋಷ್ಠಿಯಲ್ಲಿ  ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯ, ಅಕ್ಷತಾ, ಬ್ರಹ್ಮಾವರದ ಸರ್ಕಾರಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ ಜಿ, ಚೇರ್ಕಾಡಿಯ ಮಲ್ಲಿಕಾ ಹರೀಶ್‌ ಶೆಟ್ಟಿ, ನಡೂರಿನ ಅಲ್ತಾರು ನಾಗರಾಜ ಪೂಜಾರಿ, ಬ್ರಹ್ಮಾವರದ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ, ಫಕೀರಪ್ಪ ಮತ್ತು ಚೇಕಾರ್ಡಿಯ ದೇವದಾಸ ಶೆಟ್ಟಿ ಇತರರು ಚುಟುಕು ಸಾಹಿತ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.