ಬೈಂದೂರು: ನಾಗರಿಕ ಸೌಲಭ್ಯವೆನಿಸುವ ರಸ್ತೆ, ಸೇತುವೆ, ಕಟ್ಟಡಗಳು ಪ್ರಗತಿಯ ಭೌತಿಕ ಕುರುಹುಗಳು ಮಾತ್ರ. ಅವು ಶಾಶ್ವತವಲ್ಲ. ನಿಜವಾದ ಪ್ರಗತಿ ಜನರು ಸಾಧಿಸಿದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಡಗಿದೆ.
ಈ ಕಾರಣದಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಯ ವೈಯಕ್ತಿಕ ಪ್ರಗತಿ ಸಾಧಿಸುವುದರ ಜತೆಗೆ ಸಮಾಜದ ಅಭಿವೃದ್ಧಿಯ ವೇಗ ವೃದ್ಧಿಸುತ್ತದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರತಿಭಾ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ರಾಜು ಪೂಜಾರಿ ಯುಜಿಸಿ ಅನುದಾನದ ಪರಿಕರಗಳನ್ನು ಉದ್ಘಾಟಿಸಿದರು.
ಪ್ರಧಾನ ಭಾಷಣ ಮಾಡಿದ ಶೃಂಗೇರಿ ಜೆಸಿಬಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಕೆ. ರಾಘವೇಂದ್ರ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯವಸ್ತು ಅಧ್ಯಯನದ ಜತೆಗೆ ಬದುಕಿನ ಯಶಸ್ಸಿಗೆ ಅಗತ್ಯವಾದ ಸಂವಹನ ಸಾಮರ್ಥ್ಯ, ಶಿಸ್ತು, ಸಂಯಮ, ಸೌಜನ್ಯ, ವಿನಮ್ರತೆಗಳನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಹಿಂದಿನ ವಿದ್ಯಾರ್ಥಿಯೂ, ಬೈಂದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಆಗಿರುವ ಜನಾರ್ದನ ತಮ್ಮ ಕಾಲೇಜು ದಿನಗಳನ್ನು ಮೆಲುಕುಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಅನಿಲ್‌ಕುಮಾರ್ ಕಾಲೇಜು ಎದುರಿಸುತ್ತಿರುವ ಸಮಸ್ಯೆಗಳ ನಡುವೆ ನ್ಯಾಕ್ ದೃಢೀಕರಣ ಪಡೆಯುವತ್ತ ಗಮನ ಹರಿಸಬೇಕಾಗಿದೆ. ಇದಕ್ಕೆ ಬೋಧಕರ ಮತ್ತು ವಿದ್ಯಾರ್ಥಿಗಳ ಸಹಕಾರ ಬೇಕು ಎಂದರು. ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಲಲಿತಕಲಾ ಸಂಘದ ಉಪಾಧ್ಯಕ್ಷ ಡಾ. ಉಮೇಶ ಮಯ್ಯ ಇದ್ದರು. ಉಪನ್ಯಾಸಕ ರಘು ನಾಯ್ಕ್ ಸ್ವಾಗತಿಸಿ, ಸತೀಶ್ ವಂದಿಸಿದರು. ಪಾಂಡುರಂಗ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.