ADVERTISEMENT

ಅತ್ತೂರಿನ ಸೇಂಟ್ ಲಾರೆನ್ಸ್‌ ಕಿರು ದೇವಾಲಯದ ಹೆಸರಿನಲ್ಲಿ ಅಂಚೆ ಚೀಟಿ

ಎಂ.ನವೀನ್ ಕುಮಾರ್
Published 12 ಜನವರಿ 2018, 7:03 IST
Last Updated 12 ಜನವರಿ 2018, 7:03 IST
ಸೇಂಟ್ ಲಾರೆನ್ಸ್‌ ಕಿರು ದೇವಾಲಯದ
ಸೇಂಟ್ ಲಾರೆನ್ಸ್‌ ಕಿರು ದೇವಾಲಯದ   

ಕಾರ್ಕಳದ ಅತ್ತೂರಿನ ಸೇಂಟ್ ಲಾರೆನ್ಸ್‌ ಚರ್ಚ್‌ ಕಿರು ದೇವಾಲಯವಾಗಿ (ಮೈನರ್ ಬೆಸಲಿಕಾ) ಘೋಷಣೆಯಾದ ಜ್ಞಾಪಕಾರ್ಥ ಅಂಚೆ ಇಲಾಖೆ ವಿಶೇಷ ಅಂಚೆ ಚೀಟಿ ಮತ್ತು ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತಿದೆ. ಅ ಮೂಲಕ ಕಿರು ದೇವಾಲಯಕ್ಕೆ ಅಂಚೆ ಇಲಾಖೆ ಗೌರವ ಸಿಕ್ಕಿದ್ದು ಅದರ ಕೀರ್ತಿ ದೇಶದಾದ್ಯಂತ ಪಸರಿಸಲಿದೆ.

ಅತ್ತೂರು ಸಂತ ಲಾರೆನ್ಸ್ ಕಿರು ದೇವಾಲಯ ಹಾಗೂ ಪವಾಡ ಮೂರ್ತಿಯ ವಿಶೇಷ ಕವರ್ ಹಾಗೂ ದೇವಾಲಯದ ಲಾಂಛನದ ಕ್ಯಾನ್ಸಲೇಶನ್ (ಮೊಹರು) ಬಿಡುಗಡೆಯಾಗಲಿದೆ. ಎಲ್ಲ ಅಂಚೆ ಕಚೇರಿಗಳಲ್ಲಿ ಇದು ಲಭ್ಯವಾಗಲಿದೆ. ಅಂಚೆ ಚೀಟಿ ಸಂಗ್ರಹಿಸುವವರು ಸಹ ಈ ₹5 ಮೊತ್ತದ ವಿಶೇಷ ಅಂಚೆ ಚೀಟಿ ಮತ್ತು ಲಕೋಟೆಯನ್ನು ಅನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು.

ಸೇಂಟ್ ಲಾರೆನ್ಸ್‌ ಪುಣ್ಯ ಕ್ಷೇತ್ರ ರಾಜ್ಯದ ಎರಡನೇ ಕಿರು ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರಿನ ಸಂತ ಮೇರಿ ಪುಣ್ಯ ಕ್ಷೇತ್ರಕ್ಕೆ ಕಿರು ದೇವಾಲಯದ ಮಾನ್ಯತೆ ಇದೆ. ಪುಣ್ಯ ಕ್ಷೇತ್ರದ ಇತಿಹಾಸ, ಅಲ್ಲಿಗೆ ಭೇಟಿ ನೀಡುವ ಭಕ್ತರು ಹಾಗೂ ಇನ್ನಿತರ ವಿಷಯಗಳನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತದೆ.

ADVERTISEMENT

ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಅತ್ತೂರು ಸಂತ ಲಾರೆನ್ಸ್ ದೇವಾಲಯವನ್ನು 2016 ಎಪ್ರಿಲ್ 26 ರಂದು ಮಹಾದೇವಾಲಯವಾಗಿ ಉನ್ನತೀಕರಿಸಿ ಘೋಷಣೆ ಮಾಡಿದರು. 2019, ಆಗಸ್ಟ್‌ 1ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದನ್ನು ಸಂಭ್ರಮಿಸಲಾಯಿತು.

ಅತ್ತೂರು ಕಿರು ದೇವಾಲಯದ ವಾರ್ಷಿಕ ಮಹೋತ್ಸವಹ ಅದ್ಧೂರಿಯಾಗಿ ನಡೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಹಲವು ಭಾಷೆಗಳಲ್ಲಿ ಬಲಿ ಪೂಜೆ ಸಹ ನಡೆಯುತ್ತದೆ. ದುರ್ಬಲ ವರ್ಗದವರಿಗೆ ದಾನ ನೀಡುವುದು ವಾರ್ಷಿಕ ಜಾತ್ರಾ ಮಹೋತ್ಸವದ ಇನ್ನೊಂದು ವೈಶಿಷ್ಟ್ಯತೆ. ಇದೇ 21ರಿಂದ 26ರ ವರೆಗೆ ಈ ಮಹೋತ್ಸವ ನಡೆಯಲಿದೆ.

ಒಟ್ಟಾರೆ ಜಿಲ್ಲೆಯ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾಗಿದ್ದ ಅತ್ತೂರು ಚರ್ಚ್‌ಗೆ ಈಗಂತೂ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಭಾರತೀಯ ಅಂಚೆ ಇಲಾಖೆ ಕಾರ್ಕಳದ ಕಿರು ದೇವಾಲಯಕ್ಕೆ ತನ್ನ ಗೌರವ ಸಲ್ಲಿಸಿದೆ. ಮುಂದಿನ ಜನಾಂಗಕ್ಕೆ ಈ ಚರ್ಚಿನ ಇತಿಹಾಸ ತಿಳಿಯಲು, ಅಧ್ಯಯನ ನಡೆಸಲು ಇದು ಪೂರಕವಾಗಲಿದೆ ಎನ್ನುತ್ತಾರೆ ಉಡುಪಿ ಕಾರ್ಪೊರೇಷನ್ ಬ್ಯಾಂಕಿನ ಪ್ರಾಚೀನ ವಸ್ತು ಸಂಗ್ರಹಾಲಯದ ಮೇಲ್ವಿಚಾಕರ ಎಂ.ಕೆ. ಕೃಷ್ಣಯ್ಯ.

ಕಿರು ದೇವಾಲಯದಲ್ಲಿ ಜನವರಿ 18 ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.