ADVERTISEMENT

ಪುಷ್ಪ ಹೂರಣ: ಚಂದಗೊಂಡ ಸಭಾಂಗಣ

ಸುಮ ವೇದಿಕೆಯಲ್ಲಿ ಪರ್ಯಾಯ ಶ್ರೀಗಳಿಂದ ದರ್ಬಾರ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 12:39 IST
Last Updated 18 ಜನವರಿ 2018, 12:39 IST
ಹೂವಿನಿಂದ ಸಿಂಗಾರಗೊಂಡ ದರ್ಬಾರ್‌ ವೇದಿಕೆ. ಪ್ರಜಾವಾಣಿ ಚಿತ್ರ
ಹೂವಿನಿಂದ ಸಿಂಗಾರಗೊಂಡ ದರ್ಬಾರ್‌ ವೇದಿಕೆ. ಪ್ರಜಾವಾಣಿ ಚಿತ್ರ   

ಉಡುಪಿ: ಅರಳಿರೋ ಬಣ್ಣಬಣ್ಣದ ಸಾವಿರಾರು ಹೂವುಗಳನ್ನು ಜೋಡಿಸಿ ಮದುವಣಗಿತ್ತಿಯಂತೆ ಪಲಿಮಾರು ಪರ್ಯಾಯ ದರ್ಬಾರ್‌ ವೇದಿಕೆಯನ್ನು ಸಿಂಗಾರಗೊಳಿಸಲಾಗಿತ್ತು.

ಪ್ರೇಕ್ಷಕನ ಕಣ್ಣು ಕುಕ್ಕುವಂತೆ ಸಿದ್ಧವಾಗಿತ್ತು ಹೂವಿನ ವೇದಿಕೆ. ಬಗೆಬಗೆಯ ಜಾಜಿ, ಕಾಡು ಮಲ್ಲಿಗೆ, ಗೊಂಡೆ, ಲಿಲ್ಲಿ, ಡೇಲಿಯಾ, ಗುಲಾಬಿ ಜತೆಗೆ ಸೇರಿಸಿ ಕೂಡಿದ ಹಸಿರು ಎಲೆಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಅಡಿಕೆ ಹಾಗೂ ಕೆಂದಾಳಿ ಸೀಯಾಳದ ಸಾಲು ವೇದಿಕೆಯ ಅಂದಕ್ಕೆ ಸಾಂಪ್ರದಾಯಿಕ ಮೆರಗು ನೀಡಿತ್ತು.

ನೈಸರ್ಗಿಕ ಹೂವಿನ ಪರಿಮಳ ಮಠದ ಪರಿಸರದಲ್ಲಿ ಜನರನ್ನು ಆಕರ್ಷಿಸುತ್ತಿತ್ತು. ಮಠಕ್ಕೆ ಬಂದ ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ಫೇಸ್ ಬುಕ್‌ನಲ್ಲಿ ಲೈವ್‌ ನೀಡಲು ಮುಗಿ ಬೀಳುತ್ತಿರುವ ದೃಶ್ಯಗಳು ಕಂಡು ಬಂದಿತ್ತು.

ADVERTISEMENT

ಅಷ್ಟಮಠಾಧೀಶರು ಭಾಗವಹಿಸುವ ದರ್ಬಾರ್ ವೇದಿಕೆಯ ನಿರ್ಮಾಣ ಕೂಡ ಸಾಂಪ್ರದಾಯಿಕವಾಗಿ ಸಜ್ಜಾಗಿತ್ತು. ತುಮಕೂರು, ಹಾಸನ, ಶಿವಮೊಗ್ಗದಿಂದ ಸುಮಾರು ₹ 5 ಲಕ್ಷದ ಹೂವುಗಳನ್ನು ತರಿಸಿಕೊಳ್ಳಲಾಗಿತ್ತು. ಇದನ್ನು ಪಲಿಮಾರು ಮಠ, ಕೃಷ್ಣ ಮಠ ಹಾಗೂ ರಾಜಾಂಗಣದ ದರ್ಬಾರ್‌ ವೇದಿಕೆಯ ಸಿಂಗಾರಕ್ಕೆ ಬಳಸಲಾಗಿದೆ.

ದರ್ಬಾರ್ ವೇದಿಕೆ ನಿರ್ಮಾಣಕ್ಕೆ ಪಡುಬಿದ್ರೆಯಿಂದ ನವದುರ್ಗ ಫೆಂಡ್ಸ್‌ನ 50 ಯುವಕರ ತಂಡ ಬುಧವಾರ ಬೆಳಿಗ್ಗೆಯಿಂದ ಬೀಡುಬಿಟ್ಟಿದೆ. ಈ ತಂಡ 8 ವರ್ಷಗಳಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.