ADVERTISEMENT

ಮಟ್ಕಾ ಆರೋಪಿಗಳ ವಿರುದ್ಧ ಇನ್ನಷ್ಟು ಕಠಿಣ ಕ್ರಮ: ಲಕ್ಷ್ಮಣ್ ನಿಂಬರಗಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 7:18 IST
Last Updated 9 ಫೆಬ್ರುವರಿ 2018, 7:18 IST

ಉಡುಪಿ: ಮಟ್ಕಾ ಪ್ರಕರಣದ ಆರೋಪಿಗಳ ವಿರುದ್ಧ ಭದ್ರತಾ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಹೇಳಿದರು. ಶುಕ್ರವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು ಆಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಮಟ್ಕಾದ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲು ಆರಂಭಿಸಲಾಗಿದೆ. ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳಲು ಭದ್ರತಾ ಪ್ರಕರಣ (ಸೆಕ್ಯೂರಿಟಿ ಕೇಸ್‌) ದಾಖಲಿಸಲಾಗುವುದು. ಆರೋಪಿಯಿಂದ ‘ಇನ್ನೊಮ್ಮೆ ಮಟ್ಕಾ ದಂಧೆ ನಡೆಸುವುದಿಲ್ಲ. ಒಂದು ವೇಳೆ ಭಾಗಿಯಾದರೆ ₹5 ಲಕ್ಷ ನೀಡುತ್ತೇನೆ’ ಎಂದು ಬರೆಯಿಸಿಕೊಳ್ಳಲಾಗುವುದು.

ತಹಶೀಲ್ದಾರ್ ಅವರ ಎದುರು ಆರೋಪಿ ಬಾಂಡ್ ನೀಡಬೇಕಾಗುತ್ತದೆ. ಉಲ್ಲಂಘನೆಯಾದರೆ ಹಣವನ್ನು ಕಟ್ಟಬೇಕಾಗುತ್ತದೆ. ಹಣ ಕಟ್ಟಲು ವಿಫಲನಾದರೆ ಆತನ ವಿರುದ್ಧ ಪ್ರಕರಣದ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಸ್ವಲ್ಪ ಹಣದ ಆಸೆಗೆ ದಂಧೆ ನಡೆಸುವವರಿಗೆ ಕಡಿವಾಣ ಹಾಕಲು ಇದೊಂದು ಉತ್ತಮ ಸಾಧನ. ಕಳೆದ 3 ವರ್ಷದ ಮಟ್ಕಾ ಪ್ರಕರಣಗಳ, ಬಂಧನದ ಮಾಹಿತಿ ಪಡೆದು ಪಟ್ಟಿ ತಯಾರಿಸಲಾಗುವುದು ಎಂದು ಅವರು ಹೇಳಿದರು.

ಮಟ್ಕಾ ಪ್ರಕರಣದ ಆರೋಪಿಗಳನ್ನು ಗಡಿಪಾರು ಮಾಡುವ ಪ್ರಯತ್ನವೂ ಮುಂದುವರೆದಿದೆ. ಕೆಲವು ಪ್ರಕರಣಗಳು ಕುಂದಾಪುರ ಉಪ ವಿಭಾಗಾಧಿಕಾರಿ ನ್ಯಾಯಾಲಯ ಹಾಗೂ ಕೆಲವು ಜಿಲ್ಲಾಧಿಕಾರಿ ಅವರ ನ್ಯಾಯಾಲಯದಲ್ಲಿ ಇವೆ ಎಂದು ಅವರು ಮಾಹಿತಿ ನೀಡಿದರು. ಮಟ್ಕಾ ದಂಧೆಯ ಬಗ್ಗೆ ಹಿಂದಿನ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದಿದ್ದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ದೂರುಗಳ ಸಂಖ್ಯೆ ತುಂಬಾ ಕಡಿಮೆ ಇದೆ ಎಂದರು.

ADVERTISEMENT

ಬೈಂದೂರಿನಲ್ಲಿ ಈ ಹಿಂದೆ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬ ಈಗ ಫೋನ್ ಮೂಲಕ ಹಣ ಸಂಗ್ರಹಿಸಿ ಅದನ್ನು ಭಟ್ಕಳದಲ್ಲಿ ಇನ್ನೊಬ್ಬನಿಗೆ ನೀಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಣಿಪಾಲದ ಮಣ್ಣಪಳ್ಳ ಕೆರೆಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ. ಅಲ್ಲಿ ಪೊಲೀಸ್ ಗಸ್ತು ಹಾಕಿಸಲಾಗುತ್ತದೆ. ಆದಿ ಉಡುಪಿಯಲ್ಲಿ ಪರಿಶಿಷ್ಟ ಜಾತಿಯವರ ವಿದ್ಯಾರ್ಥಿ ನಿಲಯ ಇರುವ ಕಡೆ ಬಾರ್ ಇರುವ ಬಗ್ಗೆ ದೂರು ಬಂದಿತ್ತು. ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಸಮೀಕ್ಷೆ ಮಾಡಿ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ. ಕೆಲವು ನಿಯಮ ಉಲ್ಲಂಘನೆಯಾಗಿರುವುದ ಕಂಡು ಬಂದಿದೆ ಎಂದರು.

ಮೀನು ಸಾಗಣೆ ಮಾಡುವ ಲಾರಿಗಳು ನೀರನ್ನು ರಸ್ತೆಗೆ ಬಿಡುತ್ತಿರುವುದರಿಂದ ತೊಂದರೆ ಆಗುತ್ತಿರುವ ಬಗ್ಗೆ ಹಲವಾರು ದೂರು ಬಂದಿವೆ. ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತಲೆಮರೆಸಿಕೊಂಡ ಅಕ್ರಮ ಮರಳು ದಂಧೆ ಆರೋಪಿಗಳು

ಅಕ್ರಮ ಮರಳುಗಾರಿಕೆ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಬ್ರಹ್ಮಾವರ ಹಾಗೂ ಸುತ್ತಮುತ್ತ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಉಡುಪಿ ಕಾರಾಗೃಹದ ದುರಸ್ಥಿ ಕಾರ್ಯ ನಡೆಯುತ್ತಿದೆ ಹಾಗೂ ಕಾರಾವರ ಕಾರಾಗೃಹ ಜೈಲು ಭರ್ತಿಯಾಗಿರುವುದರಿಂದ ಆರೋಪಿಗಳನ್ನು ಬೆಳಗಾವಿಗೆ ಕಳುಹಿಸಲಾಗಿದೆ ಎಂದು ಲಕ್ಷ್ಮಣ್ ನಿಂಬಗರಿ ಹೇಳಿದರು.

ಪರವಾನಗಿ ಅವಧಿ ಮುಗಿದು 20 ದಿನ ಆಗಿದ್ದರೂ ಒಟ್ಟು 9 ಮಂದಿ ಪರವಾನಗಿದಾರರು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದರು. ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದರು. ಖಾಸಗಿ ಬಸ್‌ಗಳಲ್ಲಿ ಹಿರಿಯರಿಗೆ ಸೀಟು ಮೀಸಲಿಡುವ ಬಗ್ಗೆ, ಬ್ರೇಕ್ ಲೈಟ್, ಮಿರರ್ ಹಾಕುವಂತೆ ಸಂಘಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.