ADVERTISEMENT

ಉಡುಪಿ ಅಭಿವೃದ್ಧಿ ಸಮಗ್ರ ಅಭಿವೃದ್ಧಿ ಯೋಜನೆ ರೂಪುಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 13:58 IST
Last Updated 11 ಆಗಸ್ಟ್ 2022, 13:58 IST
ಜನಾರ್ದನ ಮರವಂತೆ
ಜನಾರ್ದನ ಮರವಂತೆ   

ಉಡುಪಿ ಜಿಲ್ಲೆಯಲ್ಲಿ ಈಗ ನಡೆಯುತ್ತಿರುವ ಇಲಾಖಾವಾರು ಯೋಜನಾನುಷ್ಠಾನ ಬದಲಿಗೆ ಸಮಗ್ರ ಅಭಿವೃದ್ಧಿ ಗುರಿ ಹೊಂದಿದ ಹತ್ತು/ಹದಿನೈದು ವರ್ಷಾವಧಿಯ ಮುನ್ನೋಟದ ಯೋಜನೆ ರೂಪಿಸಿ ಅನುಷ್ಠಾನಿಸಬೇಕು. ಇದರಲ್ಲಿ ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ದೊರೆಯಬೇಕು. ಗ್ರಾಮಗಳ ಕನಿಷ್ಠ ಶೇ 20 ಭೂಪ್ರದೇಶದಲ್ಲಿ ತೋಟಗಾರಿಕೆ ಹೊರತಾದ ಹಸಿರು ಇರಬೇಕು. ಈಗಿರುವ ಜೀವವೈವಿಧ್ಯದ ರಕ್ಷಣೆ ಜತೆಗೆ ಅಳಿದವುಗಳ ಪುನರುಜ್ಜೀವನಕ್ಕೆ ಚಾಲನೆ ನೀಡಬೇಕು. ನಿಗದಿತ ಅವಧಿಯಲ್ಲಿ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ ಪೂರ್ಣಗೊಳ್ಳಬೇಕು. ಗ್ರಾಮೀಣ ಜನರ ನಗರ ವಲಸೆ ತಡೆಯಲು ಪ್ರತಿ ಗ್ರಾಮದಲ್ಲೂ ಕಿರು ಹಾಗೂ ಸಣ್ಣ ಕೈಗಾರಿಕಾ ವಲಯ ಸ್ಥಾಪಿಸಬೇಕು. ಪ್ರವಾಸಿ ತಾಣಗಳ ಸರ್ಕೀಟ್ ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಿ ಅವುಗಳ ನಡುವೆ ಕ್ಷಿಪ್ರ ಸಂಪರ್ಕ ಕಲ್ಪಿಸಬೇಕು. ಶಾಲೆಗಳಲ್ಲಿನ ವಿದ್ಯಾರ್ಥಿ ಸಂಖ್ಯೆಯ ಅಸಮತೋಲನ ತೊಡೆದುಹಾಕಲು ಆಂಗ್ಲ ಮಾಧ್ಯಮ ಶಾಲೆಗಳನ್ನೂ ಒಳಗೊಂಡ 'ನೆರೆಹೊರೆ ಶಾಲೆ' ಪರಿಕಲ್ಪನೆಯನ್ನು ಅನುಷ್ಠಾನಿಸಬೇಕು. ಸ್ಥಳೀಯಾಡಳಿತ ಹಂತದ ಸಾಮಾಜಿಕ ನ್ಯಾಯ ಸಮಿತಿಗಳನ್ನು ಬಲಪಡಿಸಿ ಅವುಗಳ ಮೂಲಕ ಸಾಮಾಜಿಕ ನ್ಯಾಯ ಪಾಲನೆ, ತಾರತಮ್ಯ, ಶೋಷಣೆ, ದೌರ್ಜನ್ಯ ತಡೆ ಜೊತೆಗೆ ವ್ಯಸನ ಮುಕ್ತಿ ಮತ್ತು ಸಮುದಾಯ ಸಾಮರಸ್ಯ ಸಾಧಿಸಬೇಕು. ಭ್ರಷ್ಟಾಚಾರ ತೊಡೆದುಹಾಕಲು ಜಿಲ್ಲಾ ಮಟ್ಟದಲ್ಲಿ ಸಶಕ್ತ ದೂರು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಬೇಕು.

–ಎಸ್.ಜನಾರ್ದನ ಮರವಂತೆ, ಸಂಪನ್ಮೂಲ ವ್ಯಕ್ತಿ

‘ಪ್ರತಿ ಹಳ್ಳಿಗಳಿಗೂ ಮೂಲಸೌಕರ್ಯ ಒದಗಿಸಲಿ’

ADVERTISEMENT

ಉಡುಪಿ ಜಿಲ್ಲೆಯಲ್ಲಿ ಅಭಿವೃದ್ಧಿಯಾಗಿರುವುದು ಕಡಿಮೆ, ಅಭಿವೃದ್ಧಿ ಆಗಬೇಕಾಗಿರುವುದು ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯಗಳ ಸಮಸ್ಯೆ ಎದ್ದು ಕಾಣುತ್ತದೆ. ಸರಿಯಾದ ರಸ್ತೆ ಇಲ್ಲ, ಕೆಲವು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿಲ್ಲ, ಕುಡಿವ ನೀರಿನ ಸಮಸ್ಯೆ ಇದೆ. ಹೀಗೆ ಸಮಸ್ಯೆಗಳ ಪಟ್ಟಿ ಮಾಡುತ್ತಲೇ ಹೋಗಬಹುದು. ಈಚೆಗೆ ಬೈಂದೂರು ತಾಲ್ಲೂಕಿನ ಕಾಲ್ತೋಡು ಎಂಬಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಕಾಲುಸಂಕದಿಂದ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿರುವ ನೋವು ಜನರ ಮನಸ್ಸಿಂದ ಮಾಸಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಾಲಕಿ ಬಲಿಯಾಗಬೇಕಾಯಿತು. ಉಡುಪಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜಿನ ಅವಶ್ಯಕತೆ ಇದೆ. ಜಿಲ್ಲಾಧಿಕಾರಿಗಳು ಗ್ರಾಮವಾಸ್ತವ್ಯ ಮಾಡಿ ಪ್ರತಿ ಗ್ರಾಮಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪ್ರಯತ್ನಿಸಬೇಕು. ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸ್ವಾರ್ಥ ರಾಜಕಾರಣವನ್ನು ಬದಿಗಿಟ್ಟು ಮಾದರಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು

ಸಂತೋಷ್. ಪಿ. ಶೆಟ್ಟಿ, ಕೊರ್ಗಿ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.