ADVERTISEMENT

ಬಸ್ ಹರಿದು ವಿದ್ಯಾರ್ಥಿ ಸಾವು: ಮಗನ ಕಣ್ಣುಗಳನ್ನು ದಾನ ಮಾಡಿದ ಪೋಷಕರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 15:58 IST
Last Updated 28 ಜನವರಿ 2023, 15:58 IST
ಬಸ್‌ನ ಚಕ್ರದಡಿ ಸಿಲುಕಿ ಮೃತಪಟ್ಟ ಸುದೀಪ್‌.
ಬಸ್‌ನ ಚಕ್ರದಡಿ ಸಿಲುಕಿ ಮೃತಪಟ್ಟ ಸುದೀಪ್‌.   

ಕುಂದಾಪುರ: ಬಸ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಬಸ್‌ನ ಚಕ್ರದಡಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಶನಿವಾರ ಬೆಳಿಗ್ಗೆ ಹೆಮ್ಮಾಡಿಯ ಜಂಕ್ಷನ್‌ನಲ್ಲಿ ನಡೆದಿದೆ.

ಕಟ್ ಬೇಲ್ತೂರಿನ ನಾಗಪ್ಪ ಪೂಜಾರಿ ಹಾಗೂ ಜಲಜಾ ದಂಪತಿ ಪುತ್ರ ಕೋಟೇಶ್ವರ ಕಾಗೇರಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ (20) ಮೃತ ದುರ್ದೈವಿ.

ಶನಿವಾರ ಕಟ್ ಬೇಲ್ತೂರಿನಿಂದ ಸಾಗರ–ಕುಂದಾಪುರಕ್ಕೆ ತೆರಳುವ ಖಾಸಗಿ ಬಸ್ ಹತ್ತಿದ್ದರು ಸುದೀಪ್‌. ಬಸ್‌ನೊಳಗೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿದ್ದರಿಂದ ಫುಟ್‌ ಬೋರ್ಡ್‌ ಮೇಲೆ ನಿಂತಿದ್ದರು.

ADVERTISEMENT

ಹೆಮ್ಮಾಡಿಯಲ್ಲಿ ಪ್ರಯಾಣಿರೊಬ್ಬರನ್ನು ಇಳಿಸಿ ಚಲಿಸಲು‌ ಮುಂದಾದಾಗ ಸುದೀಪ್ ದಿಢೀರ್‌ ಆಯತಪ್ಪಿ ಬಿದ್ದು ಹಿಂಭಾಗದ ಚಕ್ರಕ್ಕೆ ಸಿಲುಕಿದ್ದಾನೆ. ಸೊಂಟದ ಮೇಲೆ ಬಸ್‌ನ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸುದೀಪ್ ಮೃತಪಟ್ಟಿದ್ದಾರೆ.

ಸಾವಿನಲ್ಲೂ ಸಾರ್ಥಕತೆ:

ಪುತ್ರನ ಸಾವಿನ ನೋವಿನ ನಡುವೆಯೂ ಪೋಷಕರು ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ತೋರಿದ್ದಾರೆ.

ಜೀವಭಯದಲ್ಲೇ ಸಂಚಾರ:

ಕುಂದಾಪುರ ಪರಿಸರದ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳು ಒಂದೇ ಸಮಯದಲ್ಲಿ ಆರಂಭವಾಗುವ ಕಾರಣ ಬೆಳಗಿನ ಸಮಯದಲ್ಲಿ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತವೆ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಸ್‌ನ ಫುಟ್‌ ಬೋರ್ಡ್‌ ಮೇಲೆ ನಿಂತು ಜೀವ ಭಯದಲ್ಲಿ ಸಾಗಬೇಕಾದ ಪರಿಸ್ಥಿತಿ ಇದೆ.

ಬಸ್‌ನಿಂದ ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿದ್ದರೂ ಹೆಚ್ಚುವರಿ ಬಸ್‌ಗಳನ್ನು ಹಾಕದ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನಿಷ್ಠ ಶಾಲಾ-ಕಾಲೇಜಿನ ಸಮಯದಲ್ಲಾದರೂ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ರಿಕ್ಷಾ ಚಾಲಕರ‌‌ ಪ್ರಯತ್ನಕ್ಕೆ ಶ್ಲಾಘನೆ:

ಘಟನೆ ಸಂಭವಿಸಿದ ಕೂಡಲೇ ರಕ್ಷಣೆಗೆ ಮುಂದಾದ ಹೆಮ್ಮಾಡಿಯ ಆಟೋ ಚಾಲಕ ಪ್ರವೀಣ್ ದೇವಾಡಿಗ ಮತ್ತವರ ಸ್ನೇಹಿತರು ಸುದೀಪ್ ಅವರನ್ನು ಬದುಕುಳಿಸಲು ಆಟೋದಲ್ಲಿಯೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ದುರದೃಷ್ಟವಶಾತ್ ಸುದೀಫ್‌ ಬದುಕುಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.