ಉಡುಪಿ: ಆಯುರ್ವೇದ ಅಂತರರಾಷ್ಟ್ರೀಯ ವೈದ್ಯಕೀಯ ಪದ್ಧತಿಯಾಗಬೇಕಾದರೆ ವೈಜ್ಞಾನಿಕ ಪುರಾವೆಗಳು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಖಾಸಗಿ ಆಯುರ್ವೇದ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಆಯುರ್ವೇದಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಗಲಿದೆ ಎಂದು ಧರ್ಮಸ್ಥಳದ ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಉದ್ಯಾವರ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ರತ್ನಶ್ರೀ ಆರೋಗ್ಯಧಾಮ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಆಯುರ್ವೇದ ಚಿಕಿತ್ಸೆಯತ್ತ ರೋಗಿಗಳು ಹೆಚ್ಚು ಒಲವು ತೋರಿದರೆ ಸಹಜವಾಗಿ ಆಯುರ್ವೇದ ವಿಶ್ವಮಾನ್ಯವಾಗಲಿದೆ. ಇದಕ್ಕೆ ಸರ್ಕಾರದ ವಿಶೇಷ ಪ್ರಯತ್ನ ಅಗತ್ಯವಿಲ್ಲ, ಬದಲಾಗಿ ಆಯುರ್ವೇದ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಅಗತ್ಯವಿದೆ ಎಂದರು.
ಆಯುರ್ವೇದ ಎರಡನೇ ದರ್ಜೆಯ ಚಿಕಿತ್ಸಾ ಪದ್ಧತಿ ಇಲ್ಲ. ಆಯುರ್ವೇದ ಚಿಕಿತ್ಸಾ ವಿಧಾನವೂ ಬದಲಾಗುತ್ತಿದೆ. ಎಣ್ಣೆಯ ಜಿಡ್ಡುಹಿಡಿದ, ಕಮಟು ವಾಸನೆಯ ಬೆಡ್‌ಗಳ ಬದಲಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎಂದರು.
ಆಯುರ್ವೇದ ಬಳಸಿ ಕೊರೊನಾದಿಂದ ಗುಣಮುಖರಾದ ರೋಗಿಗಳು ಬಹಳಷ್ಟಿದ್ದಾರೆ. ಕೊರೊನಾಗೆ ಆಯುರ್ವೇದ ಚಿಕಿತ್ಸೆಯನ್ನು ಸರ್ಕಾರ ಮಾನ್ಯ ಮಾಡಬೇಕಾದ ಅಗತ್ಯವಿದೆ. ಸರ್ಕಾರಗಳು ಆಸ್ಪತ್ರೆ ಹಾಗೂ ವೈದ್ಯರ ಮೇಲೆ ಹೆಚ್ಚು ಹಣ ವ್ಯಯ ಮಾಡಿದರೆ ಸಾಲದು, ಆಯುರ್ವೇದ ಪದ್ಧತಿಯನ್ನು ಬೆಳೆಸಲು ಆದ್ಯತೆ ನೀಡಬೇಕು ಎಂದು ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಗೋ ಸಂರಕ್ಷಣಾ ಕೇಂದ್ರಗಳು ಹಾಗೂ ಗೋಶಾಲೆಗಳನ್ನು ತೆರೆಯಲಾಗುತ್ತದೆ. ಹಲವು ಕಡೆಗಳಲ್ಲಿ ಗೋಶಾಲೆಗಳಿಗೆ ಜಾಗ ಗುರುತಿಸಲಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಗೋಶಾಲೆಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ನಿಯಂತ್ರಣಕ್ಕೆ ಬಂದಿತ್ತು. ಈಚೆಗೆ ಹೆಚ್ಚಾಗುತ್ತಿರುವ ದೂರುಗಳಿದ್ದು, ಗೋವುಗಳ ರಕ್ಷಣೆಯಲ್ಲಿ ಅಧಿಕಾರಿಗಳ ಲೋಪವಿದ್ದರೆ ಗಮನಹರಿಸುತ್ತೇವೆ. ಗೋರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಕಾಯ್ದೆ ಅನುಷ್ಠಾನದಲ್ಲಿ ಲೋಪಗಳು ಆಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೃಷಿ ಕಾಯ್ದೆಗಳ ಮುಖ್ಯ ಉದ್ದೇಶವೇ ದಲ್ಲಾಳಿಗಳ ಕಿರಿಕಿರಿ ತಪ್ಪಿಸುವುದು. ರೈತರ ಉದ್ಧಾರಕ್ಕಾಗಿ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ವಿರೋಧಿಗಳು ವಿನಾ ಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಲ್ಲ ಟೀಕೆಗಳಿಗೆ ಬಿಜೆಪಿ ಸರ್ಕಾರ ಉತ್ತರ ಕೊಡಲಿದೆ ಎಂದು ಕೋಟ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.