ADVERTISEMENT

ಉಡುಪಿ: ವರ್ಷದೊಳಗೆ ಸ್ವರ್ಣೆ ಸ್ನಾನ ಘಟ್ಟ ಪೂರ್ಣ

ಸ್ವರ್ಣಾ ನದಿಗೆ ಬಾಗಿನ ಅರ್ಪಿಸಿದ ಸಚಿವ ವಿ.ಸುನಿಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:30 IST
Last Updated 6 ಅಕ್ಟೋಬರ್ 2021, 12:30 IST
ಮಣಿಪಾಲದ ಶೀಂಬ್ರಾ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಸ್ವರ್ಣೆಗೆ ಬುಧವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕತಿ ಸಚಿವ ವಿ.ಸುನಿಲ್ ಕುಮಾರ್ ಕುಟುಂಬ ಸಮೇತ ಬಾಗಿನ ಅರ್ಪಿಸಿದರು.
ಮಣಿಪಾಲದ ಶೀಂಬ್ರಾ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಸ್ವರ್ಣೆಗೆ ಬುಧವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕತಿ ಸಚಿವ ವಿ.ಸುನಿಲ್ ಕುಮಾರ್ ಕುಟುಂಬ ಸಮೇತ ಬಾಗಿನ ಅರ್ಪಿಸಿದರು.   

ಉಡುಪಿ: ಉಡುಪಿಯ ಜೀವನದಿ ಸ್ವರ್ಣಾ ಸದಾ ಮೈದುಂಬಿ ಹರಿಯಬೇಕು, ಕೃಷಿ ಚಟುವಟಿಕೆಗಳಿಗೆ ನೀರು ಸಿಗಬೇಕು ಎಂಬ ದೃಷ್ಟಿಯಿಂದ ಸ್ವರ್ಣೆಗೆ ಬಾಗಿನ ಅರ್ಪಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಮಣಿಪಾಲದ ಶೀಂಬ್ರಾ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಬುಧವಾರ ಸ್ವರ್ಣೆಗೆ ಕುಟುಂಬ ಸಮೇತ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಸಚಿವರು, ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ಭಾರತೀಯ ಸಂಸ್ಕೃತಿಯಾಗಿದ್ದು, ಸ್ವರ್ಣಾ ನದಿಗೆ ಪೂಜೆ ಸಲ್ಲಿಸಲಾಗಿದೆ ಎಂದರು.

ಸ್ವರ್ಣಾ ನದಿ ವ್ಯಾಪ್ತಿಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ಸ್ನಾನ ಘಟ್ಟ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಮುಂದಿನ ವರ್ಷದೊಳಗೆ ಕಾಮಗಾರಿ ಮುಕ್ತಾಯವಾಗಲಿದೆ. ಸ್ವರ್ಣ ಉಡುಪಿ ಜಿಲ್ಲೆಗೆ ಸಮೃದ್ಧಿ ನೀಡಲಿ ಎಂದರು.

ADVERTISEMENT

ಕರಾವಳಿಗೆ ರಂಗಾಯಣ ಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈಡೇರಿದ್ದು, ಯಕ್ಷಗಾನ ನಾಟಕ ಹಾಗೂ ನೃತ್ಯವನ್ನೊಳಗಂಡ ಯಕ್ಷ ರಂಗಾಯಣವನ್ನು ಕಾರ್ಕಳದಲ್ಲಿ ಸ್ಥಾಪಿಸಲಾಗುವುದು. ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನ ಆವರಣದಲ್ಲಿ 2 ಎಕರೆಯಲ್ಲಿ ಯಕ್ಷ ರಂಗಾಯಣ ನಿರ್ಮಾಣವಾಗಲಿದ್ದು, ಯಕ್ಷಗಾನ, ನಾಟಕ, ಸಂಗೀತ ಹಾಗೂ ನೃತ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.

ಹಿಂದಿನ ಸರ್ಕಾರ ಜಿಲ್ಲಾ ರಂಗಮಂದಿರಕ್ಕೆ ಅನುದಾನ ಬಿಡುಗಡೆ ಮಾಡದೆ ಗುದ್ದಲಿ ಪೂಜೆ ನೇರಿವೇರಿಸಿತ್ತು. ಈ ವರ್ಷ ಅನುದಾನದ ಲಭ್ಯತೆ ನೋಡಿಕೊಂಡು, ಜಿಲ್ಲಾ ರಂಗಮಂದಿರ ಸ್ಥಾಪನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನವರಾತ್ರಿ ಉತ್ಸವವನ್ನು ಭಕ್ತಿ ಪ್ರದಾನವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೋವಿಡ್‌ ಸುತ್ತೋಲೆ ಪಾಲನೆಯೊಂದಿಗೆ ನವರಾತ್ರಿ ಆಚರಿಸಲಾಗುತ್ತಿದ್ದು, ಜಂಬೂಸವಾರಿಯಲ್ಲಿ 500 ಮಂದಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದರು.

ಮೊದಲ ಡೋಸ್ ಕೋವಿಡ್ ಲಸಿಕೆ ಪೂರ್ಣಗೊಳಿಸಿದ ರಾಜ್ಯದ ಎರಡನೇ ಜಿಲ್ಲೆ ಎಂಬ ಹೆಗ್ಗಳಿಕೆಗೆ ಉಡುಪಿ ಪಾತ್ರವಾಗಿದೆ. ಡಿಸೆಂಬರ್ ಹೊತ್ತಿಗೆ 2ನೇ ಡೋಸ್ ಕೂಡ ಪೂರ್ಣಗೊಳಿಲಾಗುವುದು. ಈ ಸಾಧನೆಗೆ ಕಾರಣರಾದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.