ADVERTISEMENT

ಸಮುದ್ರ ತೀರ ಅತಿಕ್ರಮಣ ತಡೆಗೆ ಮಾಸ್ಟರ್ ಪ್ಲಾನ್‌

ಖಾಸಗಿ ಭೂಮಿ ಗುರುತಿಸಿ ಗಡಿಗಲ್ಲು ಹಾಕಲು ನಿರ್ಧಾರ

ಬಾಲಚಂದ್ರ ಎಚ್.
Published 3 ಜುಲೈ 2022, 1:53 IST
Last Updated 3 ಜುಲೈ 2022, 1:53 IST
ಮಲ್ಪೆ ಬೀಚ್‌
ಮಲ್ಪೆ ಬೀಚ್‌   

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಹಾಗೂ ಸಮುದ್ರ ತೀರಗಳ ಅತಿಕ್ರಮಣ ತಡೆಗೆ ಜಿಲ್ಲಾ ಪಂಚಾಯಿತಿ ವಿಭಿನ್ನ ಕಾರ್ಯ ಯೋಜನೆ ರೂಪಿಸಿದೆ. ಕಡಲ ತೀರಗಳಲ್ಲಿರುವ ಖಾಸಗಿ ಭೂಮಿ ಹಾಗೂ ಸರ್ಕಾರದ ಭೂಮಿಯ ಗಡಿ ಗುರುತಿಸಿ ಗ್ರಾಮ ಪಂಚಾಯಿತಿಯಿಂದ ಗಡಿಕಲ್ಲುಗಳನ್ನು ಹಾಕಲು ನಿರ್ಧರಿಸಿದೆ.

ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ 80 ಕಿ.ಮೀ ಕರಾವಳಿಯ ತೀರವಿದ್ದು, ಮಲ್ಪೆ, ಪಡುಕೆರೆ, ಮರವಂತೆ, ಕಾಪು, ಪಡುಬಿದ್ರಿ, ಕೋಡಿ, ಕೋಡಿಬೆಂಗ್ರೆ ಸೇರಿದಂತೆ ಹಲವು ಪ್ರಸಿದ್ಧ ಬೀಚ್‌ಗಳಿವೆ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಜಿಲ್ಲೆಯ ಕಡಲ ತೀರಗಳು ಆಕರ್ಷಿಸುತ್ತಿವೆ.

ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಕಡಲ ತೀರಗಳಲ್ಲಿ ರಸ್ತೆ, ಶೌಚಾಲಯ ಹಾಗೂ ಮೂಲಸೌಕರ್ಯಕ್ಕೆ ಒತ್ತು ನೀಡಬೇಕಾಗಿದ್ದು, ಈ ಕಾರ್ಯಕ್ಕೆ ಸಮುದ್ರ ತೀರಗಳ ಅತಿಕ್ರಮಣ ಅಡ್ಡಿಯಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಪ್ರಸನ್ನ.

ADVERTISEMENT

ಬೀಚ್‌ಗಳಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದರೆ ಜಾಗ ಬಹಳ ಮುಖ್ಯ. ಆದರೆ, ಜಿಲ್ಲೆಯ ಕಡಲ ತೀರಗಳಲ್ಲಿ ಸರ್ಕಾರದ ಭೂಮಿ ಅತಿಕ್ರಮಣವಾಗಿರುವುದು ಕಂಡುಬಂದಿದೆ.

ಬೀಚ್‌ಗಳಲ್ಲಿ ಕೆಲವರು ಸ್ವಂತ ಜಾಗದ ಜತೆಗೆ ಸರ್ಕಾರಕ್ಕೆ ಸೇರಿದ ಕಡಲ ತೀರವನ್ನೂ ಅತಿಕ್ರಮಿಸಿಕೊಂಡು ತಂತಿ ಬೇಲಿ, ಕಾಂಪೌಂಡ್‌ ಕಟ್ಟಿಕೊಂಡಿದ್ದಾರೆ. ಹೋಂಸ್ಟೇಗಳು, ರೆಸಾರ್ಟ್‌ಗಳು, ವಾಣಿಜ್ಯ ಮಳಿಗೆಗಳ ಮಾಲೀಕರು ಸರ್ಕಾರದ ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಪರಿಣಾಮ ಕಡಲ ತೀರಗಳು ಕ್ರಮೇಣ ಕಿರಿದಾಗುತ್ತಿದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ.

ಬೀಚ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನಕ್ಕೆ ಖಾಸಗಿಯವರು ಅಡ್ಡಿ ಮಾಡುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮುದ್ರ ದಂಡೆಯಲ್ಲಿರುವ ಖಾಸಗಿ ಜಮೀನುಗಳ (ಮಾಲ್ತಿ ಜಾಗ) ಗಡಿ ಗುರುತಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

ಗಡಿ ಗುರುತಿಸುವ ಕಾರ್ಯಕ್ಕೆ ಸರ್ವೇಯರ್‌ಗಳನ್ನೂ ನೇಮಿಸುವಂತೆ ಕೋರಲಾಗಿದೆ. ಕಡಲ ತೀರ ಅತಿಕ್ರಮಣವಾಗಿದ್ದರೆ ತೆರವು ಕಾರ್ಯಕ್ಕೆ ಮುಂದಾಗುವಂತೆ ಮನವಿ ಮಾಡಲಾಗಿದೆ ಎಂದು ಸಿಇಒ ಪ್ರಸನ್ನ ಮಾಹಿತಿ ನೀಡಿದರು.

ಸಮುದ್ರ ತೀರಗಳ ಅತಿಕ್ರಮಣ ತಡೆಗೆ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲಾಡಳಿತ ಸರ್ವೆ ಮಾಡಿಸಿ ಖಾಸಗಿ ಹಾಗೂ ಸರ್ಕಾರದ ಭೂಮಿ ಗುರುತಿಸಿಕೊಟ್ಟರೆ ಗಡಿಕಲ್ಲುಗಳನ್ನು ಹಾಕಿಸಲಾಗುವುದು. 200 ಮೀಟರ್‌ಗೆ ಒಂದರಂತೆ ಗಡಿಕಲ್ಲುಗಳನ್ನು ಹಾಕಿಸಿ ಜಿಪಿಎಸ್‌ ಲೊಕೇಷನ್‌ ಮಾಡಿಸಲಾಗುವುದು. ಭವಿಷ್ಯದಲ್ಲಿ ಕಡಲ ತೀರಗಳು ಅತಿಕ್ರಮಣವಾಗದಂತೆ ತಡೆಯಲಾಗುವುದು ಎಂದು ಸಿಇಒ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.