ಪಡುಬಿದ್ರಿ: ‘ಉದ್ಯೋಗ ಖಾತರಿ ಯೋಜನೆಯು ಗ್ರಾಮಸ್ಥರಿಗೆ ತಮ್ಮಿಂದ ತಮಗೋಸ್ಕರ ಮಾಡುವ ಯೋಜನೆಯಾಗಿದ್ದು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಅತ್ಯುತ್ತಮ ಯೋಜನೆ’ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಸಾಮಾಜಿಕ ಪರಿಶೋಧನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಸ್ಥರ ಬೇಡಿಕೆಯಂತೆ ವೈಯಕ್ತಿಕ, ಸಾಮೂಹಿಕ ಕಾಮಗಾರಿ ನಡೆಸಬಹುದಾಗಿದ್ದು, ಕೃಷಿ ಬಾವಿ ನಿರ್ಮಾಣ, ದನದ ಹಟ್ಟಿ, ಇಂಗು ಗುಂಡಿ, ಕೋಳಿ ಗೂಡು, ಆಡು ಶೆಡ್ಡು, ತೋಡು ಹೂಳೆತ್ತುವುದು, ಮೈದಾನ ಸಮತಟ್ಟು ಸಹಿತ ಯಾವುದೇ ಕಾಮಗಾರಿ ನಡೆಸುವ ಅವಕಾಶವಿದೆ. ಇದರ ಹಣ ನೇರವಾಗಿ ಫಲಾನುಭವಿ ಖಾತೆಗೆ ವರ್ಗಾವಣೆಯಾಗುತ್ತದೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದರು.
ಕೃಷಿ ಇಲಾಖೆ ಮೂಲಕ ಬಿತ್ತನೆ ಬೀಜ, ವಿದ್ಯುತ್ ಮತ್ತು ಡೀಸೆಲ್ ಪಂಪ್, ಹನಿ ನೀರಾವರಿಗೆ ಶೇ 50 ಸಬ್ಸಿಡಿ ಅವಕಾಶ, ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90 ಸಬ್ಸಿಡಿ ಇದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಉದ್ಯೋಗ ಖಾತರಿ ಯೋಜನೆ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ರೋಹಿತ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಪಿಡಿಒ ಪ್ರವೀಣ್ ಡಿಸೋಜ, ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಸುಲೇಮಾನ್, ಪ್ರಕಾಶ್ ರಾವ್, ಸೌಮ್ಯಾ ಸುರೇಂದ್ರ ಪೂಜಾರಿ, ರೂಪಾ ಆಚಾರ್ಯ, ಅನಿತಾ ಆನಂದ, ನಫೀಸ್ ಬಾನು, ಕೃಷಿ ಅಧಿಕಾರಿ ಪುಷ್ಪಲತಾ, ಗ್ರಾಮ ಸಂಪನ್ಮೂಲ ವ್ಯಕ್ತಿಗಳು, ಸಿಬ್ಬಂದಿ, ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.