ADVERTISEMENT

ಮೋರ್ಚಾ ಪ್ರಕೋಷ್ಠಗಳು ಬಿಜೆಪಿ ಬಲ

ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 15 ಮೇ 2022, 14:31 IST
Last Updated 15 ಮೇ 2022, 14:31 IST
ಉಡುಪಿಯ ಹೋಟೆಲ್ ಶಾರದಾ ಇಂಟರ್‌ನ್ಯಾಷನಲ್‌ ಸಭಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ರಘುಪತಿ ಭಟ್‌ ಉದ್ಘಾಟಿಸಿದರು.
ಉಡುಪಿಯ ಹೋಟೆಲ್ ಶಾರದಾ ಇಂಟರ್‌ನ್ಯಾಷನಲ್‌ ಸಭಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ರಘುಪತಿ ಭಟ್‌ ಉದ್ಘಾಟಿಸಿದರು.   

ಉಡುಪಿ: ದೇಶದೆಲ್ಲೆಡೆ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ವಾದಕ್ಕೆ ವಿರುದ್ಧವಾದ ನೀತಿಗಳನ್ನು ಅನುಸರಿಸಿದ ಕಾರಣಕ್ಕೆ ಜನರಿಂದ ತಿರಸ್ಕೃತವಾಯಿತು. ಬಿಜೆಪಿ ಜನರೊಟ್ಟಿಗೆ, ಕಾರ್ಯಕರ್ತರೊಟ್ಟಿಗೆ ಉಳಿದುಕೊಂಡ ಕಾರಣಕ್ಕೆ ಅಧಿಕಾರ ಚುಕ್ಕಾಣಿ ಹಿಡಿಯಿತು ಎಂದು ಶಾಸಕ ರಘುಪತಿ ಭಟ್‌ ವಿಶ್ಲೇಷಿಸಿದರು.

ಉಡುಪಿಯ ಶಾರದಾ ಇಂಟರ್‌ನ್ಯಾಷನಲ್‌ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಕಾಂಗ್ರೆಸ್‌ ಅಧಿಕಾರ ಚುಕ್ಕಾಣಿ ಹಿಡಿದ ಕೂಡಲೇ ಪಕ್ಷಕ್ಕೆ ದುಡಿದ ಕಾರ್ಯಕರ್ತರನ್ನು ಹಾಗೂ ಜನರ ಹಿತ ಮರೆತ ಕಾರಣ ಅಧಿಕಾರದಿಂದ ದೂರ ಸರಿಯಬೇಕಾಯಿತು. ಸಂಘಟನಾತ್ಮಕ ದೃಷ್ಟಿಯಿಂದಲೂ ಹಿಂದುಳಿಯಬೇಕಾಯಿತು ಎಂದರು.

ಆದರೆ, ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಪಕ್ಷ ಸಂಘಟನೆಯಲ್ಲಿ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಾಗುತ್ತದೆ. ಕಾರ್ಯಕರ್ತರಿಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಪರಿಣಾಮ ಪಕ್ಷ ಬೆಳೆಯುತ್ತಿದೆ ಎಂದರು.

ADVERTISEMENT

ಆಡಳಿತದಲ್ಲಿರುವ ಪಕ್ಷ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರುವುದು ಬಹಳ ಕಷ್ಟ. ಆದರೆ, ಬಿಜೆಪಿ ನಿರಂತರವಾಗಿ ಗೆಲುವು ಕಾಣುತ್ತಿರುವುದು ಪಕ್ಷದ ಸಂಘಟನಾತ್ಮಕ ಶಕ್ತಿಗೆ ಉತ್ತಮ ನಿದರ್ಶನ. ಕಾರ್ಯಕರ್ತರ ಸಹಭಾಗಿತ್ವದ ಫಲದಿಂದ ಪಕ್ಷ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ವಿವಿಧ ಮೋರ್ಚಾಗಳು, ಪ್ರಕೋಷ್ಠಗಳು ರಾಜಕೀಯ ಪಕ್ಷವೊಂದರ ಬಲವಿದ್ದಂತೆ. ಹೊಸ ಕಾರ್ಯಕರ್ತರ ಸೇರ್ಪಡೆ ಹಾಗೂ ಪಕ್ಷ ಸಂಘಟನೆಯ ವಿಚಾರದಲ್ಲಿ ಮೋರ್ಚಾಗಳು, ಪ್ರಕೋಷ್ಠಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ರಾಜ್ಯ ಕೈಗಾರಿಕಾ ಪ್ರಕೋಷ್ಠದ ಸಹ ಸಂಚಾಲಕ ಗುಂಜೂರು ಚರಣ್, ಮಾತನಾಡಿ, ನರೇಂದ್ರ ಮೋದಿಯ ನೇತೃತ್ವದಲ್ಲಿ ಭಾರತ ಡಿಜಿಟಲ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಬೆಳೆಯುತ್ತಿದೆ. ಯುಪಿಐ ಬಳಕೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಹಾಗೂ ರಾಜ್ಯ ಮತ್ತು ಜಿಲ್ಲಾ ಪ್ರಕೋಷ್ಠಗಳ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.