ಕುಂದಾಪುರ: ಏಕವಿನ್ಯಾಸ ನಕ್ಷೆಯ ಅವ್ಯವಸ್ಥೆ ವಿರುದ್ಧ ಇದೇ 28ರಂದು ಬಿಜೆಪಿ ವತಿಯಿಂದ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಟನಾ ಮೆರವಣಿಗೆ, ಧರಣಿಯ ಪೂರ್ವಭಾವಿ ಸಭೆ ಇಲ್ಲಿನ ಬಿಜೆಪಿ ಮಂಡಲದ ಕಾರ್ಯಾಲಯದಲ್ಲಿ ಸೋಮವಾರ ನಡೆಯಿತು.
ಶಾಸಕ ಎ. ಕಿರಣ್ ಕುಮಾರ ಕೊಡ್ಗಿ ಮಾತನಾಡಿ, ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಮುಖ್ಯವಾಹಿನಿಗೆ ಬಂದು ಸಮಸ್ಯೆ ಬಗ್ಗೆ ತಿಳಿಸಿದರೆ ಮಾತ್ರ ಸ್ಪಂದನೆ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಏಕವಿನ್ಯಾಸ ನಕ್ಷೆಗಾಗಿ ತೊಂದರೆ ಅನುಭವಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕರ್ತರು ಪ್ರಯತ್ನಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಹೋರಾಟ ಮಾಡುವ ಮೂಲಕ ನಿದ್ದೆ ಮಂಪರಿನಲ್ಲಿರುವ ಕಾಂಗ್ರೆಸ್ ಸರ್ಕಾರದ ಕಣ್ಣು ತೆರೆಸುವ ಕೆಲಸ ಆಗಬೇಕಾಗಿದೆ. ನಮೂನೆ 9/11 ನೀಡುವ ಅಧಿಕಾರ ಈ ಹಿಂದೆ ಇದ್ದಂತೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ದೊರಕುವಂತಾಗಿ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಅಣಿಯಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಗಿರೀಶ್ ಅಂಚನ್, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ಶೆಣೈ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಭಾಗವಹಿಸಿದ್ದರು. ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ ನಿರೂಪಿಸಿದರು. ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.