ADVERTISEMENT

ಅನುದಾನಿತ ಶಾಲೆಗಳ ಮುಚ್ಚಲು ಹುನ್ನಾರ: ಭೋಜೇಗೌಡ ಆರೋಪ

ವಿಧಾನ ಪರಿಷತ್ ಸದಸ್ಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 15:58 IST
Last Updated 22 ಜೂನ್ 2022, 15:58 IST
ನಗರದ ಸೇಂಟ್‌ ಸಿಸಿಲಿ ಶಾಲೆಯಲ್ಲಿ ಬುಧವಾರ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಜತೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಸಂವಾದ ನಡೆಸಿದರು.
ನಗರದ ಸೇಂಟ್‌ ಸಿಸಿಲಿ ಶಾಲೆಯಲ್ಲಿ ಬುಧವಾರ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಜತೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಸಂವಾದ ನಡೆಸಿದರು.   

ಉಡುಪಿ: ಅನುದಾನಿತ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚಿಸಲು ಹಿರಿಯ ಅಧಿಕಾರಿಗಳು ವ್ಯವಸ್ಥಿತ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಆರೋಪಿಸಿದರು.

ನಗರದ ಸೇಂಟ್‌ ಸಿಸಿಲಿ ಶಾಲೆಯಲ್ಲಿ ಬುಧವಾರ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಜತೆ ಸಂವಾದ ನಡೆಸಿದ ಅವರು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡುತ್ತಿಲ್ಲ. ನಿವೃತ್ತಿ ಬಳಿಕ ತೆರವಾದ ಸ್ಥಾನಗಳಿಗೆ ನೇಮಕಾತಿ ನಡೆಯುತ್ತಿಲ್ಲ. ಅಂತಿಮವಾಗಿ ಶಿಕ್ಷಕರ ಕೊರತೆಯ ಕಾರಣ ಮುಂದಿಟ್ಟು ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ದೂರಿದರು.

ಶಿಕ್ಷಕರ ಕೊರತೆ ಇರುವ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ವಾರದೊಳಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಹಾಕಲಾಗುವುದು. ಶಾಲೆಗಳ ಮಾನ್ಯತೆ ನವೀಕರಣಕ್ಕೆ ಅಡ್ಡಿಯಾಗಿರುವ ಗೊಂದಲಗಳನ್ನೂ ನಿವಾರಿಸಲಾಗುವುದು. ಅಧಿಕಾರಿಗಳ ಬೆದರಿಕೆಗೆ ಶಿಕ್ಷಕರು ಹೆದರುವ ಅವಶ್ಯಕತೆ ಇಲ್ಲ. ನಿಯಮಗಳನ್ನು ಮುಂದಿಟ್ಟುಕೊಂಡು ಶಾಲೆಗಳನ್ನು ಮುಚ್ಚಿಸಲು ಮುಂದಾದರೆ ಅಗತ್ಯ ಕಾನೂನು ನೆರವು ನೀಡುವುದಾಗಿ ಭೋಜೇಗೌಡ ಭರವಸೆ ನೀಡಿದರು.

ADVERTISEMENT

ಯಾವುದೇ ಕಾಯ್ದೆಗಳನ್ನು ಜಾರಿಮಾಡುವ ಮುನ್ನ ಸರ್ಕಾರ ಕಾಯ್ದೆಯ ಆಶಯಗಳನ್ನು ಸಮಾಜಕ್ಕೆ ಒಪ್ಪಿಸಬೇಕು. ಸಾಧಕ ಬಾಧಕಗಳ ಕುರಿತು ಚರ್ಚೆಯಾಗಬೇಕು. ಬಳಿಕ ಉತ್ತಮ ಅಂಶಗಳನ್ನೊಳಗೊಂಡ ಕಾಯ್ದೆ ಜಾರಿಯಾಗಬೇಕು. ಆಗ ಮಾತ್ರ ಸಂವಿಧಾನದ ಆಶಯಗಳು ಈಡೇರುತ್ತವೆ.

ಸುತ್ತೋಲೆಗಳನ್ನು ಯಾವಾಗ ಹೊರಡಿಸಬೇಕು, ಕಾಯ್ದೆಗಳನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಸ್ಪಷ್ಟವಾದ ಅರಿವು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಇಲ್ಲ ಎಂದು ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಶಾಲೆಯ ಅಡುಗೆ ಮನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್‌ ದೇಶದ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಅಗ್ನಿ ಸುರಕ್ಷತಾ ಕ್ರಮಗಳ ಅನುಷ್ಠಾನಕ್ಕೆ ಆದೇಶ ನೀಡಿತು.

ಆದೇಶ ಬಂದು ಹಲವು ವರ್ಷಗಳು ಕಳೆದರೂ ಸರ್ಕಾರವೇ ಪಾಲಿಸುತ್ತಿಲ್ಲ. ಆದರೆ, ಖಾಸಗಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುತ್ತಿದೆ. ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶ ಅನ್ವಯವಾಗುವುದಿಲ್ಲವೇ ಎಂದು ಭೋಜೇಗೌಡ ಪ್ರಶ್ನಿಸಿದರು.

ಸುಪ್ರಿಂಕೋರ್ಟ್‌ ಆದೇಶಕ್ಕೆ ಚ್ಯುತಿ ಬಾರದಂತೆ ಶಾಲೆಗಳು ಪಾಲಿಸಬೇಕಾದ ನಿಯಮಗಳ ಕುರಿತು ಸರ್ಕಾರವೇ ರಚಿಸಿದ ಸಮಿತಿ ವರದಿ ಸಲ್ಲಿಸಿದ್ದರೂ ಅನುಷ್ಠಾನಗೊಳಿಸಿಲ್ಲ. ಬದಲಾಗಿ ನಿಯಮಗಳನ್ನು ಮುಂದಿಟ್ಟು ಅನುದಾನಿತ ಶಾಲೆಗಳ ಶಿಕ್ಷಕರಿಗೆ ಕಿರುಕುಳ ನೀಡಲಾಗುತ್ತಿದೆ. ಒಂದು ಶಾಲೆಯನ್ನೂ ಮುಚ್ಚಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಡಿಪಿಐ ಗೋವಿಂದ ಮಡಿವಾಳ, ಉಡುಪಿ ಬಿಇಒ ಅಶೋಕ್ ಕಾಮತ್‌, ಕುಂದಾಪುರ ಬಿಇಒ ಅರುಣ್ ಕುಮಾರ್ ಶೆಟ್ಟಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಯಶೀಲ ಶೆಟ್ಟಿ, ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಸಿಸಿಲಿಸ್ ಶಾಲೆಯ ಮುಖ್ಯೋಧ್ಯಾಯಿನಿ ಸಿಸ್ಟರ್ ಪ್ರೀತಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಅನುದಾನಿತ ಶಾಲೆಗಳ ಸಮಿತಿಯ ಉಪಾಧ್ಯಕ್ಷ ಜಯಕರ ಶೆಟ್ಟಿ ಇದ್ದರು.

ಅನುದಾನಿತ ಶಿಕ್ಷಕರ ಮನವಿ

ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ನೇಮಕಾತಿಗೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದೆ. ಅನುದಾನಿತ ಹಾಗೂ ಸರ್ಕಾರಿ ಶಾಲೆಗಳ ಮಧ್ಯೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಶಾಲೆಗಳ ಮಾನ್ಯತೆ ನವೀಕರಣ ಮಾಡಬೇಕು. ಸಮವಸ್ತ್ರ, ಭತ್ಯೆ ಒದಗಿಸಬೇಕು. ಪಠ್ಯಪುಸ್ತಕ ಪೂರೈಕೆ ಮಾಡಬೇಕು ಎಂದು ಶಿಕ್ಷಕರು ಸಭೆಯಲ್ಲಿ ಮನವಿ ಮಾಡಿದರು.

‘ಪಠ್ಯಪರಿಷ್ಕರಣೆ ಗೊಂದಲ ರಾಜಕೀಯ’

ಪಠ್ಯಪುಸ್ತಕ ಪರಿಷ್ಕರಣೆಗೆ ಹಾಗೂ ಪುಠ್ಯ ಪುಸ್ತಕ ರಚನೆಯ ಸಮಿತಿಗೆ ಖ್ಯಾತ ಶಿಕ್ಷಣ ತಜ್ಞರನ್ನು, ನಿವೃತ್ತ ಶಿಕ್ಷಕರನ್ನು ನೇಮಕ ಮಾಡುವುದನ್ನು ಬಿಟ್ಟು ತಲೆಯಲ್ಲಿ ಏನೂ ಇಲ್ಲದ ರೋಹಿತ್ ಚಕ್ರತೀರ್ಥ ಎಂಬಾತನನ್ನು ಸರ್ಕಾರ ನೇಮಿಸಿತು. ಇದರಿಂದ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಉಂಟಾಗಿದೆ. ವಿವಾದಕ್ಕೆ ರಾಜಕೀಯ ಬಣ್ಣ ಬಂದಿದೆ. ಸರ್ಕಾರದ ತಪ್ಪು ನಿರ್ಧಾರಗಳಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ ಎಂದು ಭೋಜೇಗೌಡ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.