ಬ್ರಹ್ಮಾವರ: ‘ಮನೆಯ ಸುತ್ತಮುತ್ತ ಹಾಗೂ ಕಾಡಂಚಿನ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಿದಲ್ಲಿ ಕಾಡು ಪ್ರಾಣಿಗಳ ಉಪಟಳ ಕಡಿಮೆಗೊಳಿಸಬಹುದು’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ತಾಲ್ಲೂಕು ಘಟಕದ ಯೋಜನಾಧಿಕಾರಿ ರಮೇಶ ಪಿ.ಕೆ ಹೇಳಿದರು.
ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಗ್ರಾಮಾಭಿವೃದ್ಧಿ ಯೋಜನೆಯ ಬ್ರಹ್ಮಾವರ ತಾಲ್ಲೂಕು ಆರೂರು ಕಾರ್ಯಕ್ಷೇತ್ರದ ವತಿಯಿಂದ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಹಲವು ಅಭಿವೃದ್ಧಿ ಕಾರ್ಯಗಳನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ನಡೆಸುತ್ತಿದ್ದಾರೆ. ಸ್ವಾಸ್ಥ್ಯ ಸಂಕಲ್ಪ, ಜನಜಾಗೃತಿ ಕಾರ್ಯಕ್ರಮ, ಜ್ಞಾನವಿಕಾಸ ಕಾರ್ಯಕ್ರಮ, ಕೃಷಿ ಅಭಿವೃದ್ಧಿ ಕಾರ್ಯಕ್ರಮದೊಂದಿಗೆ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮವು ಒಂದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಕೋಶಾಧಿಕಾರಿ ರಾಜೀವ ಕುಲಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಸರ್ಕಾರದಿಂದಲೂ ಆಗದಿರುವಂತ ಕೆಲಸಗಳನ್ನು ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ವೀರೇಂದ್ರ ಹೆಗ್ಗಡೆ ನಡೆಸುತ್ತಿದ್ದಾರೆ. ಇಂದು ಪ್ರತಿ ಗ್ರಾಮಗಳಲ್ಲಿನ ನಿರ್ಗತಿಕರಿಗೆ ಮಾಸಾಶನ ನೀಡುತ್ತಿದ್ದು, ಸೂರಿಲ್ಲದವರಿಗೆ ವಾತ್ಸಲ್ಯ ಮನೆ ನಿರ್ಮಿಸಿ ಕೊಡುತ್ತಿರುವುದಲ್ಲದೇ, ಮದ್ಯವ್ಯಸನಿಗಳಿಗೆ ಮದ್ಯವರ್ಜನ ಶಿಬಿರದ ಮೂಲಕ ವ್ಯಸನ ಮುಕ್ತರನ್ನಾಗಿಸಲಾಗುತ್ತಿದೆ’ ಎಂದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ವಲಯ ಮೇಲ್ವಿಚಾರಕ ಪ್ರವೀಣ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜ್ಯೋತಿ ವಂದಿಸಿದರು. ಕೃಷಿ ಮೇಲ್ವಿಚಾರಕ ರಾಘವೇಂದ್ರ ನಿರೂಪಿಸಿದರು.
ಗಿಡ ನಾಟಿ ಮಾಡಿದರಷ್ಟೇ ಸಾಲದು ಅದರ ರಕ್ಷಣೆಯ ಜವಾಬ್ದಾರಿಯೂ ನಮ್ಮ ಕರ್ತವ್ಯ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕು
-ರಾಘವೇಂದ್ರ ಪ್ರಾಂಶುಪಾಲ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.