ADVERTISEMENT

ಪಂಚಲಿಂಗೇಶ್ವರ ಬ್ರಹ್ಮರಥೋತ್ಸವ ನಾಳೆ

ಸೀತಾನದಿಯ ತಟದಲ್ಲಿರುವ ಕೋಟೆಕೇರಿ ಮಹತೋಭಾರ ದೇವಾಲಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:26 IST
Last Updated 28 ಮಾರ್ಚ್ 2023, 5:26 IST
ಪಂಚಲಿಂಗೇಶ್ವರ ದೇವಸ್ಥಾನದ ಹೊರನೋಟ
ಪಂಚಲಿಂಗೇಶ್ವರ ದೇವಸ್ಥಾನದ ಹೊರನೋಟ   

ಬ್ರಹ್ಮಾವರ: ಇಲ್ಲಿಂದ ಉತ್ತರಕ್ಕೆ 4 ಕಿ.ಮೀ. ದೂರದಲ್ಲಿ ಸೀತಾ ನದಿಯ ತಟದಲ್ಲಿರುವ, ಬಾರ್ಕೂರಿನಲ್ಲಿ ಶತಮಾನಗಳ ಹಿಂದೆ ಇದ್ದ 365 ದೇವಸ್ಥಾನಗಳ ಪೈಕಿ ಅತ್ಯಂತ ಪ್ರಾಚೀನವಾದುದು ಕೋಟೆಕೇರಿ ಪಂಚಲಿಂಗೇಶ್ವರ ದೇವಾಲಯ.

ಬಾರ್ಕೂರಿನವರಿಗೆ ಗ್ರಾಮ ದೇವರೆಂದರೆ ಕೋಟೆಕೇರಿ ಪಂಚಲಿಂಗೇಶ್ವರ. ದೇವಸ್ಥಾನದ ವಾರ್ಷಿಕ ರಥೋತ್ಸವ ಇಲ್ಲಿನ ಜನರಿಗೆ ಹಬ್ಬ. ಬಾರ್ಕೂರಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಇದಕ್ಕೊಂದು ಮಹತ್ವದ ಸ್ಥಾನವಿದೆ.

ಪಂಚಲಿಗೇಶ್ವರ ದೇವಾಲಯ ಪ್ರಾಚೀನ ಕಾಲದಲ್ಲಿ ಮಾರ್ಕಂಡೇಶ್ವರ ಹೆಸರಿನಿಂದ ಪ್ರಸಿದ್ಧಿ ಪಡೆದಿತ್ತು. ಪ್ರಾಕಾರದ ಒಳಗೆ ಪಂಚಲಿಂಗೇಶ್ವರ, ಮಹಾಲಿಂಗೇಶ್ವರ ದೇವಾಲಯಗಳಿವೆ. ಕೆಳದಿ ಅರಸರ ಆಳ್ವಿಕೆಯ ಅಂತ್ಯದವರೆಗೂ ಇದೇ ಹೆಸರಿನಿಂದ ಕರೆಯಲಾಗುತ್ತಿತ್ತು. ಅನಂತರದ ದಿನಗಳಲ್ಲಿ ರಾಜಕೀಯ ಸ್ಥಿತ್ಯಂತರದ ಪರಿಣಾಮ ಈ ದೇವಾಲಯದ ಮೇಲೂ ಬೀರಿ, ಕ್ರಮೇಣ ಹೆಸರಿನ ಪರಿವರ್ತನೆ ಆಗಿರಬಹುದೆಂದು ಊಹಿಸಲಾಗಿದೆ.

ADVERTISEMENT

ಐದು ಲಿಂಗಗಳು ಸಾಲಾಗಿ ಪ್ರತಿಷ್ಠೆಗೊಂಡಿರುವ ಕಾರಣ ಪಂಚ ಲಿಂಗೇಶ್ವರ ಎನ್ನುವ ಹೆಸರು ಬಂದಿದೆ ಎನ್ನುವ ಪ್ರತೀತಿ ಇಲ್ಲಿಯ ದೇವಸ್ಥಾನಕ್ಕಿದೆ. ಪೂರ್ವಾಭಿಮುಖವಾಗಿರುವ ದೇವಾ ಲಯದ ಸಂಕೀರ್ಣ ಆಯತಾಕಾರ ದಲ್ಲಿದೆ. ಗಜಪೃಷ್ಠ ಆಕಾರದಲ್ಲಿರುವ ಇದು ಎತ್ತರವಾದ ಜಗತಿಯ ಮೇಲೆ ಕಟ್ಟಲ್ಪಟ್ಟಿದೆ. ವಿಶಾಲವಾದ ನವರಂಗ, ಸುಕನಾಸಿ, ಗರ್ಭಗೃಹ ಮತ್ತು ಒಳಪ್ರದಕ್ಷಿಣಾ ಪಥಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಸಾಮಾನ್ಯ ರಚನೆಯ ಪಾಣಿಪೀಠದ ಮೇಲೆ 5 ಶಿಲಾಖಂಡಗಳ ರಚನೆಯಾಗಿದ್ದು, ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ ಎಂಬ ಶಿವನ ಐದು ರೂಪಗಳನ್ನು ಬಿಂಬಿಸುತ್ತವೆ.

ಐತಿಹ್ಯ: ಸೀತಾನದಿ ದಡದಲ್ಲಿ ಮಾರ್ಕಂಡೇಯ ಎಂಬ ಋಷಿ ಆಶ್ರಮ ಕಟ್ಟಿ ನೆಲೆಸಿದ್ದನು. ಶಿವನನ್ನು ಕುರಿತು ತಪಸ್ಸು ಮಾಡಿದಾಗ ಶಿವ ಪ್ರತ್ಯಕ್ಷನಾದ. ಪ್ರತ್ಯಕ್ಷನಾದ ಸ್ಥಳದಲ್ಲಿ ಶಿವಾಲಯ ನಿರ್ಮಿಸುವ ಮನಸ್ಸು ಮುನಿಗಳದ್ದಾಗಿತ್ತು. ಕೂಡಲೇ ಶಿವಲಿಂಗ ತರಲು ಕಾಶಿಗೆ ಶಿಷ್ಯನನ್ನು ಕಳುಹಿಸಿದರು. ಆದರೆ, ಯೋಜಿತ ಸಮಯಕ್ಕೆ ಲಿಂಗಗಳು ಬಾರದೇ ಇದ್ದಾಗ ಸೀತಾನದಿಯಿಂದಲೇ ಐದು ಶಿಲಾಖಂಡಗಳನ್ನು ತೆಗೆದು ಪ್ರತಿಷ್ಠಾಪಿ ಸಲಾಯಿತು. ಹೀಗೆ ಮಾರ್ಕಂಡೇಯ ಮುನಿಗಳಿಂದ ಪ್ರತಿಷ್ಠೆಗೊಂಡ ಶಿವ ಮಾರ್ಕಂಡೇಶ್ವರನಾದ. ಇತ್ತ ಕಾಶಿಗೆ ಹೋದ ಶಿಷ್ಯ ತಡವಾಗಿ ತಂದ ಲಿಂಗಗಳಲ್ಲಿ ಒಂದನ್ನಾದರೂ ಸ್ಥಾಪಿಸಬೇಕೆಂಬ ಮನಸ್ಸಿನಿಂದ ಪ್ರತ್ಯೇಕ ವಾದ ಆಲಯವನ್ನು ರಚಿಸಿ ಅದನ್ನು ಪ್ರತಿಷ್ಠಾಪಿಸಲಾಯಿತು. ಹೀಗೆ ಒಂದರ ನಂತರ ಇನ್ನೊಂದು ಎಂಬಂತೆ ಮಾರ್ಕಂಡೇಶ್ವರ ಮತ್ತು ಮಹಾಲಿಂಗೇ ಶ್ವರ ದೇವಾಲಯಗಳು ನಿರ್ಮಾಣ ವಾದವು. ಎಂದು ಐತಿಹ್ಯ ಹೇಳುತ್ತದೆ.

ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಕಳೆದ ಐದಾರು ವರ್ಷಗಳಿಂದ ನಡೆಯುತ್ತಿದೆ. ದೇವಸ್ಥಾನದಲ್ಲಿ ವಿಶೇಷವಾಗಿ ರುದ್ರಾಭಿಷೇಕ, ರಂಗಪೂಜೆ, ಬಿಲ್ವಾರ್ಚನೆಯಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.