ADVERTISEMENT

ಪಶುವೈದ್ಯೆ ಹತ್ಯೆಯ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿ

ಜಿಲ್ಲಾ ಪಶುವೈದ್ಯಕೀಯ ಸಂಘದಿಂದ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 20:15 IST
Last Updated 3 ಡಿಸೆಂಬರ್ 2019, 20:15 IST
   

ಉಡುಪಿ: ತೆಲಂಗಾಣ ರಾಜ್ಯದಲ್ಲಿ ಈಚೆಗೆ ಪಶುವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪಶುವೈದ್ಯಕೀಯ ಸಂಘದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಶುವೈದ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಬಾಬಣ್ಣ ಪೂಜಾರಿ ಮಾತನಾಡಿ, ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಮೇಲಿನ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಮೂಕಪ್ರಾಣಿಗಳ ಸೇವೆ ಮಾಡುವ ವೈದ್ಯರನ್ನೂ ದುಷ್ಟರು ಬಿಟ್ಟಿಲ್ಲ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ಥಿತರಿಗೆ ಶೀಘ್ರವೇ ಮರಣದಂಡನೆ ವಿಧಿಸಬೇಕು. ಹಂತಕರು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಆಗ್ರಹಿಸಿದರು.

ತೆಲಂಗಾಣದಲ್ಲಿ ನಡೆದ ಈ ಘಟನೆಯಿಂದಾಗಿ ಮಹಿಳಾ ಪಶು ವೈದ್ಯರು ಕರ್ತವ್ಯಕ್ಕೆ ತೆರಳಲು ಭಯ ಪಡುತ್ತಿದ್ದಾರೆ. ಹಾಗಾಗಿ ಸರ್ಕಾರ ಪಶುವೈದ್ಯರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಪ್ರತಿಭಟನೆಗೂ ಮೊದಲು ಪಶುವೈದ್ಯರು ಕಪ್ಪು ಪಟ್ಟಿ ಧರಿಸಿಕೊಂಡು ಮಣಿಪಾಲ ರಜತಾದ್ರಿಯ ಸರ್ಕಲ್‌ನಿಂದ ಜಿಲ್ಲಅಧಿಕಾರಿ ಕಚೇರಿವರೆಗೆ ಮೌನ ಪಾದಯಾತ್ರೆ ನಡೆಸಿದರು. ಜಿಲ್ಲಾಕಾರಿ ಕಚೇರಿ ಮುಂಭಾಗ ಧರಣಿ ನಡೆಸಿ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಮೂಲಕ ತೆಲಂಗಾಣದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಪ್ರದೀಪ್‌ ಕುಮಾರ್‌, ಉಪಾಧ್ಯಕ್ಷ ಡಾ. ನಾಗರಾಜ, ಕೋಶಾಧಿಕಾರಿ ಡಾ. ಮಂಜುನಾಥ್‌ ಅಡಿಗ, ಜಂಟಿ ಕಾರ್ಯದರ್ಶಿ ಡಾ. ಸಂತೋಷ್‌ ಕುಮಾರ್‌, ಡಾ. ವಗ್ನೇಶ್‌ ಚೌಹಾಣ್‌, ಪ್ರಮುಖರಾದ ಡಾ. ಗೋಪಾಲಕೃಷ್ಣ ಎಲ್‌. ಭಟ್‌, ಡಾ. ಸೂರ್ಯನಾರಾಯಣ, ಡಾ. ಸುಬ್ರಹ್ಮಣ್ಯ ಪ್ರಸಾದ್‌, ಉಡುಪಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ದಯಾನಂದ ಪೈ, ಮಾಜಿ ಉಪನಿರ್ದೇಶಕ ಡಾ. ಸರ್ವೋತ್ತಮ ಉಡುಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.