ಬ್ರಹ್ಮಾವರ: ಹಂಗಾರಕಟ್ಟೆಯ 1.62 ಹೆಕ್ಟೇರ್ ಪ್ರದೇಶದಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿ, ಬಂದರು ಮತ್ತು ಮೀನುಗಾರಿಕೆ ವಿಭಾಗ ಉಡುಪಿ ಇವರ ಮೂಲಕ ಸಾಗರಮಾಲ ಯೋಜನೆಯಡಿ ಕೋಸ್ಟಲ್ ಬರ್ತ್ ಅನ್ನು ಅಭಿವೃದ್ಧಿಪಡಿಸುವ ಕುರಿತು ಪರಿಸರದ ಸಾರ್ವಜನಿಕ ಆಲಿಕೆ ಸಭೆಯು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಜಿಲ್ಲಾಧಿಕಾರಿ ಅವರು, ಪ್ರಸ್ತಾವಿತ ಯೋಜನೆಯ ಉದ್ದೇಶದ ಕುರಿತು ಸಾರ್ವಜನಿಕರಿಗೆ ತಿಳಿಸಿದರು. ಬಳಿಕ ಯೋಜನಾದಾರರು ಯೋಜನೆ ಬಗ್ಗೆ ಶಕ್ತಿ ಬಿಂದು ಪ್ರದರ್ಶನ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರ ಅಭಿಪ್ರಾಯ, ಅನಿಸಿಕೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಕರಾವಳಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಸುರಕ್ಷಿತವಾಗಿ ತಂಗಲು ಆಶ್ರಯ ಕಲ್ಪಿಸಲು ಸಿಮೆಂಟ್, ಖಾದ್ಯ ತೈಲ ಮತ್ತು ಕೃಷಿ ಉತ್ಪನ್ನ ಮತ್ತು ಇತರ ವಾಣಿಜ್ಯ ಸರಕುಗಳನ್ನು ನಿರ್ವಹಿಸಲು, ಸುರಕ್ಷಿತ ಆಶ್ರಯ ಮತ್ತು ಸಂಗ್ರಹಣೆಗಾಗಿ ಬೇಡಿಕೆಗಳಿರುವುದರಿಂದ, ಸರಕು ಸಾಗಣೆಯ ಅನುಕೂಲಕ್ಕಾಗಿ 1.62 ಹೆಕ್ಟೇರ್ ಪ್ರದೇಶದಲ್ಲಿ ಕೋಸ್ಟಲ್ ಬರ್ತ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮೀನುಗಾರರ ಸಂಘದವರು ಹಾಗೂ ಬಂದರು ಅಭಿವೃದ್ಧಿ ಸಮಿತಿ ಸಂಘದವರು ಪ್ರಸ್ತಾಪಿತ ಯೋಜನೆಯ ಅಭಿವೃದ್ಧಿಗೆ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ, ಸದರಿ ಪ್ರಸ್ತಾಪಿತ ಸ್ಥಳದಲ್ಲಿ ಮೀನುಗಾರರ ದೋಣಿಯನ್ನು ನಿಲುಗಡೆ ಮಾಡಲು ಅವಕಾಶ ಮಾಡಿಕೊಡುವಂತೆ, ಅಳಿವೆಯಲ್ಲಿ 3.5 ಮೀಟರ್‌ಗಿಂತ ಹೆಚ್ಚಿನ ಹೂಳನ್ನು ತೆಗೆಯದಂತೆ, ಬ್ರೇಕ್ ವಾಟರ್ ನಿರ್ಮಿಸಲು ಹಾಗೂ ಸುತ್ತಮುತ್ತಲ ವಾಸದ ಕುಟುಂಬಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ ರೀತಿಯಲ್ಲಿ ಯೋಜನೆ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್, ಹಂಗಾರಕಟ್ಟೆ ಬೇಂಗ್ರೆ ಮೀನುಗಾರರ ಸಂಘದ ಅಧ್ಯಕ್ಷ ರಾಜು ಬಂಗೇರ, ಹಂಗಾರಕಟ್ಟೆ ಬೇಂಗ್ರೆ ಬಂದರು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಸಮಿತಿಯ ಸಲಹೆಗಾರರಾದ ಕೇಶವ ಕುಂದರ್, ಶಂಕರ ಬಂಗೇರ, ಉತ್ತರ ಕರ್ಕೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.