ADVERTISEMENT

‘ಸ್ವಾತಂತ್ರ್ಯ ಗಳಿಸಿದ್ದು, ಉಳಿಸಿದ್ದು ಕಾಂಗ್ರೆಸ್‌’

ಪಕ್ಷದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಕಾಲ್ನಡಿಗೆ ಜಾಥಾದಲ್ಲಿ ಮೊಯಿಲಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:19 IST
Last Updated 7 ಆಗಸ್ಟ್ 2022, 7:19 IST
ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ 75ನೇ ಸ್ವಾತಂತ್ರ್ರೋತ್ಸವದ ಬೃಹತ್ ಕಾಲ್ನಡಿಗೆ ಜಾಥವನ್ನು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು
ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ 75ನೇ ಸ್ವಾತಂತ್ರ್ರೋತ್ಸವದ ಬೃಹತ್ ಕಾಲ್ನಡಿಗೆ ಜಾಥವನ್ನು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು   

ಹೆಬ್ರಿ: ಅಂದು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟು ಸ್ವಾತಂತ್ರ್ಯವನ್ನು ಉಳಿಸಿ ಕೊಟ್ಟಿದ್ದು ಕಾಂಗ್ರೆಸ್‌. ದೇಶ ಕಟ್ಟಲು ನೆಹರೂ ಕುಟುಂಬ 4 ಬಲಿದಾನ ಮಾಡಿದೆ. ಆ ಮೂಲಕ ಬಲಿಷ್ಠ ಭಾರತವನ್ನು ಕಾಂಗ್ರೆಸ್‌ ಕಟ್ಟಿದೆ. ಯಾವ ಶಕ್ತಿಯಿಂದಲೂ ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಅಪಹರಿಸಲು ಅಸಾಧ್ಯ. ಕಾಂಗ್ರೆಸ್‌ ರಕ್ತಹರಿಸಿ ಹೋರಾಟ ಮಾಡಿಯಾದರೂ ದೇಶವನ್ನು ಉಳಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಹಾಗೂ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಕಾಲ್ನಡಿಗೆ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಬ್ರಿಟಿಷರು ಒಡೆದು ಆಳಿದ ನೀತಿಯನ್ನೇ ಬಿಜೆಪಿಯವರು ಮುಂದುವರಿಸಿದ್ದಾರೆ. ಅಂದು ಸಮಗ್ರ ಭಾರತವನ್ನು ಒಡೆದದ್ದೇ ಅಂದಿನ ಹಿಂದೂ ಮಹಾಸಭಾ, ಈಗ ದೇಶ ಕಟ್ಟಿದ ಕಾಂಗ್ರೆಸ್‌ ಪಕ್ಷಕ್ಕೆ ನೀತಿ ಹೇಳುತ್ತಾರೆ. ಈಗ ನಮಗೆ ಸ್ವಾತಂತ್ರ್ಯೋತ್ಸವ ಅಮೃತ ಸಂಭ್ರಮ. ನಾವೆಲ್ಲ ದ್ವೇಷ ಬಿಟ್ಟು ಒಂದಾಗಿ ಸಮೃದ್ಧ ಭಾರತವನ್ನು ಕಟ್ಟಿ ಮುನ್ನಡೆಸಬೇಕಾಗಿದೆ ಎಂದರು.

ADVERTISEMENT

ಹೆಬ್ರಿ ತಾಲ್ಲೂಕು ಕಚೇರಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ತನಕ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಕಾಲ್ನಡಿಗೆ ಜಾಥಾ ನಡೆಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರದ ಕುಟುಂಬದವರಿಗೆ ಗೌರವಾರ್ಪಣೆ, ಹೆಬ್ರಿ ಪೇಟೆಯಲ್ಲಿ ಹುತಾತ್ಮ ಯೋಧ ನಾಡ್ಪಾಲು ಉದಯ ಪೂಜಾರಿ ಅವರ ಪ್ರತಿಮೆಗೆ ಡಾ.ವೀರಪ್ಪ ಮೊಯಿಲಿ ಮಾಲಾರ್ಪಣೆ ಮಾಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಭಾಸ್ಕರ್ ಮೊಯಿಲಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಪ್ರಮುಖರಾದ ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಪ್ರವೀಣ್ ಬಲ್ಲಾಳ್, ಬಿಪಿನ್ ಚಂದ್ರಪಾಲ್ ನಕ್ರೆ, ಸದಾಶಿವ ದೇವಾಡಿಗ, ದೀಪಾ ಭಂಡಾರಿ ಹೆಬ್ರಿ, ಸುಧಾಕರ ಕೋಟ್ಯಾನ್, ಸುರೇಂದ್ರ ಶೆಟ್ಟಿ, ಹುತ್ತುರ್ಕೆ ದಿನೇಶ ಶೆಟ್ಟಿ, ರಂಜಿನಿ ಹೆಬ್ಬಾರ್ ಕಬ್ಬಿನಾಲೆ, ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು ಇದ್ದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಚೈತ್ರ ಕಬ್ಬಿನಾಲೆ ನಿರೂಪಿಸಿದರು.

‘ಬಿಜೆಪಿ ಪಾಠ ನಮಗೆ ಬೇಡ’

ದೇಶದ ಇತಿಹಾಸವನ್ನು ತಿರುಚಲು ಹೊರಟಿರುವ ಬಿಜೆಪಿಯಿಂದ ನಮಗೆ ಪಾಠಬೇಡ, ಇತ್ತೀಚಿನವರೆಗೆ ಆರ್‌ಎಸ್ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸದ ಬಿಜೆಪಿಯಿಂದ ಕಾಂಗ್ರೆಸ್ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ತಿಳಿಯುವ ಅಗತ್ಯ ಇಲ್ಲ ಎಂದ ಕಾಂಗ್ರೆಸ್‌ ಮುಖಂಡ ವಿನಯ ಕುಮಾರ್ ಸೊರಕೆ ಹೇಳಿದರು.

ಪರಿಹಾರಕ್ಕೆ ಒತ್ತಾಯ

ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಕೋಮು ಧ್ವೇಷದ ಹತ್ಯೆಗಳು ನಡೆಯುತ್ತಿವೆ. ಜನ ಆತಂಕದಿಂದ ಇದ್ದಾರೆ. ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಬೆಂಬಲಿಗರಿಂದ ಹತ್ಯೆಯಾದ ಕೊಕ್ಕರ್ಣೆ ಪ್ರವೀಣ್‌ ಪೂಜಾರಿ, ಸಾಲಿಗ್ರಾಮದ ಅವಳಿ ಕೊಲೆ ಪ್ರಕರಣದ ಸಂತ್ರಸ್ಥರ ಮನೆಗೂ ಸೂಕ್ತ ಪರಿಹಾರ ನೀಡಿ ಎಂದು ಸೊರಕೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.