ADVERTISEMENT

ಉಡುಪಿ | ಬಕ್ರೀದ್‌ ಕಳೆಗುಂದಿಸಿದ ಕೊರೊನಾ

ಮಸೀದಿಗಳಲ್ಲಿ ನಮಾಜ್, ಸರಳವಾಗಿ ಹಬ್ಬ ಆಚರಣೆ‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 16:34 IST
Last Updated 30 ಜುಲೈ 2020, 16:34 IST
ಬಕ್ರೀದ್ ಹಬ್ಬಕ್ಕೆ ಮುನ್ನಾ ದಿನವಾದ ಗುರುವಾರ ಬೀಡಿನಗುಡ್ಡೆಯಲ್ಲಿ ಕುರಿ ಆಡುಗಳ ವ್ಯಾಪಾರ ನಡೆಯಿತು.
ಬಕ್ರೀದ್ ಹಬ್ಬಕ್ಕೆ ಮುನ್ನಾ ದಿನವಾದ ಗುರುವಾರ ಬೀಡಿನಗುಡ್ಡೆಯಲ್ಲಿ ಕುರಿ ಆಡುಗಳ ವ್ಯಾಪಾರ ನಡೆಯಿತು.   

ಉಡುಪಿ: ಕೋವಿಡ್‌ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಬಕ್ರೀದ್ ಹಬ್ಬದ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ಸರ್ಕಾರದ ಮಾರ್ಗಸೂಚಿಗಳಂತೆ ನಿರ್ವಹಿಸಲು ಮುಸ್ಲಿಂ ಮುಖಂಡರು ನಿರ್ಧರಿಸಿದ್ದಾರೆ.

ಮಸೀದಿಗಳ ಆಡಳಿತ ಕಮಿಟಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಶುಕ್ರವಾರ ಹಂತಹಂತವಾಗಿ ಸಾಮೂಹಿಕ ನಮಾಜ್ ಮಾಡಲು ನಿರ್ಧರಿಸಲಾಗಿದೆ. ಉಡುಪಿಯ ಜಾಮೀಯ ಮಸೀದಿಯಲ್ಲಿ ಬೆಳಿಗೆ 7ಗಂಟೆಗೆ ನಮಾಜ್ ನಡೆಯಲಿದ್ದು, ಪಾಸ್‌ ಹಂಚಿಕೆ ಮಾಡಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ನಮಾಜ್‌ಗೆ ಅವಕಾಶ ಕಲ್ಪಿಸಲಾಗಿದೆ.

ಬ್ರಹ್ಮಗಿರಿಯ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಬೆಳಗ್ಗೆ 6.30 ಹಾಗೂ 7ಕ್ಕೆ ನಮಾಜ್ ನಡೆಯಲಿದೆ. ಕಿರಿಮಂಜೇಶ್ವರ ಜಾಮೀಯ ಮಸೀದಿಯಲ್ಲಿ ಬೆಳಿಗ್ಗೆ 645ಕ್ಕೆ, ಮಲ್ಪೆ ಅಬೂಬಕ್ಕರ್ ಸಿದ್ದೀಕಿ ಮಸೀದಿಯಲ್ಲಿ 6.55ಕ್ಕೆ, ಉದ್ಯಾವರದ ಖದೀಮಿ ಜಾಮೀಯ ಮಸೀದಿಯಲ್ಲಿ 7.15ಕ್ಕೆ, ಗುಜ್ಜರಬೆಟ್ಟು ಮೊಯಿದ್ದೀನ್ ಜಾಮೀಯ ಮಸೀದಿಯಲ್ಲಿ 7ಕ್ಕೆ, ಹೈಕಾಡಿಯ ಜಾಮೀಯ ಮಸೀದಿಯಲ್ಲಿ 7.15ಕ್ಕೆ ಪ್ರಾರ್ಥನೆ ಸಲ್ಲಿಕೆಯಾಗಲಿದೆ.

ADVERTISEMENT

ಕುರಿಗಳಿಗೆ ಕುಸಿದ ಬೇಡಿಕೆ:ಪ್ರತಿವರ್ಷ ಬಕ್ರೀದ್ ಹಬ್ಬಕ್ಕೆ ಮುನ್ನಾ ದಿನ ಆಡು ಹಾಗೂ ಕುರಿಗಳ ಖರೀದಿ ಭರಾಟೆ ಜೋರಾಗಿರುತ್ತಿತ್ತು. ಈ ವರ್ಷ ಕೊರೊನಾ ಕಾರಣದಿಂದ ಖರೀದಿ ಉತ್ಸಾಹ ಕಾಣುತ್ತಿಲ್ಲ. ಬೀಡಿನಗುಡ್ಡೆ ಮೈದಾನದಲ್ಲಿ ವ್ಯಾಪಾರ ಕಳೆದ ವರ್ಷದಂತೆ ನಡೆಯಲಿಲ್ಲ. ಹೊರ ಜಿಲ್ಲೆಗಳಿಂದಲೂ ಮಾರಾಟಗಾರರು ಹೆಚ್ಚಾಗಿ ಬಂದಿರಲಿಲ್ಲ.

ಬಕ್ರೀದ್ ಹಬ್ಬದಲ್ಲಿ ಕುರಿ ಹಾಗೂ ಆಡಿನ ಮಾಂಸಕ್ಕೆ ಬೇಡಿಕೆ ಹೆಚ್ಚು. ಉಳ್ಳವರು ದಾನದ ರೂಪದಲ್ಲಿ ಮಾಂಸವನ್ನು ಹಂಚುವ ಪದ್ಧತಿ ಇದೆ. ಆದರೆ, ಕೊರೊನಾದಿಂದಾಗಿ ಈ ಬಾರಿ ಸರಳವಾಗಿ ಹಬ್ಬ ಆಚರಿಸಲು ಮುಸ್ಲಿಮರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.