ADVERTISEMENT

ಕೋವಿಡ್‌ 3ನೇ ಅಲೆ ಎದುರಿಸಲು ಸಜ್ಜು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ತೆಕ್ಕಟ್ಟೆ ಗ್ರಾಮ ಪಂಚಾಯಿತಿಗೆ ಸಚಿವ ಕೋಟ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 4:45 IST
Last Updated 30 ಜೂನ್ 2021, 4:45 IST
ಕುಂದಾಪುರ ಸಮೀಪದ ತೆಕ್ಕಟ್ಟೆ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿದ ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಕೋವಿಡ್‌ ತಡೆಗೆ ತೆಗೆದುಕೊಂಡ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಮಲ್ಯಾಡಿ ಶಿವರಾಮ ಶೆಟ್ಟಿ ಇದ್ದರು.
ಕುಂದಾಪುರ ಸಮೀಪದ ತೆಕ್ಕಟ್ಟೆ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿದ ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಕೋವಿಡ್‌ ತಡೆಗೆ ತೆಗೆದುಕೊಂಡ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಮಲ್ಯಾಡಿ ಶಿವರಾಮ ಶೆಟ್ಟಿ ಇದ್ದರು.   

ಕುಂದಾಪುರ: ‘ಕೋವಿಡ್ 2 ನೇ ಅಲೆಯಲ್ಲಿನ ಸಾವಿನ ಪ್ರಕರಣಗಳಿಂದಾಗಿ ಜನರಲ್ಲಿ ಭೀತಿ ಉಂಟಾಗಿತ್ತು. ಸರ್ಕಾರವು ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಮಾರ್ಗಸೂಚಿಯಿಂದಾಗಿ ಸಾವಿನ ಪ್ರಮಾಣ ನಿಯಂತ್ರಿಸಿ, ಕೋವಿಡ್‌ ಸೋಂಕಿನ ಪ್ರಭಾವವನ್ನು ಕಡಿಮೆ ಮಾಡಲು ಸಾಧ್ಯ‘ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತೆಕ್ಕಟ್ಟೆ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿ, ಕೋವಿಡ್‌ ಕಾರ್ಯಪಡೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ಜತೆಗೆ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಕೋವಿಡ್ 3ನೇ ಅಲೆಯ ಸಾಧ್ಯತೆಯ ಕುರಿತಂತೆ ಯಾವುದೇ ಭಯ ಬೇಡ. ಸರ್ಕಾರ ಇದನ್ನು ಎದುರಿಸಲು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಸರ್ಕಾರದ ಮಾರ್ಗಸೂಚಿ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಸೋಂಕು ಹಿಮ್ಮೆಟ್ಟಿಸಲು ಸಾಧ್ಯ. ಗ್ರಾಮದ ಜನರು ಒಟ್ಟಾಗಿ ಜಾಗೃತೆಯ ಹೆಜ್ಜೆ ಇಟ್ಟಲ್ಲಿ ಕೋವಿಡ್‌ ಮುಕ್ತ ಗ್ರಾಮನ್ನಾಗಿಸುವುದು ದೊಡ್ಡ ಕೆಲಸವಲ್ಲ ಎಂದು ಅವರು ಹೇಳಿದರು.

ADVERTISEMENT

ವಾರದಲ್ಲಿ ಒಂದು ದಿನ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಗ್ರಾಮಕ್ಕೆ ಬಂದವರ ತಪಾಸಣೆ ಮಾಡಬೇಕು. ಹೊರ ಭಾಗದಿಂದ ಬಂದವರು ಕನಿಷ್ಟ ಮೂರು ದಿನಗಳು ಹೋಂ ಕ್ವಾರಂಟೈನ್ ಆಗಲು ಸೂಚಿಸಬೇಕು. ಸರ್ಕಾರದ ಮಾರ್ಗಸೂಚಿ ಪಾಲನೆಗೆ ತೊಡಕು ಉಂಟಾದಲ್ಲಿ ಪೊಲೀಸ್‌ ಇಲಾಖೆಯ ಸಹಕಾರ ಪಡೆದುಕೊಳ್ಳಬೇಕು. ಗ್ರಾಮ ಮಟ್ಟದ ಕಾರ್ಯಪಡೆ ಹಾಗೂ ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳು ಶ್ಲಾಘನೀಯ ಎಂದರು.

ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಕೋವಿಡ್‌ ಕಾರ್ಯಪಡೆ ಮಾರ್ಗದರ್ಶಕ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೋಭಾ, ತೆಕ್ಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ದೇವಾಡಿಗ, ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಒ ಸುನೀಲ್, ಗ್ರಾಮಲೆಕ್ಕಿಗ ದೀಪಿಕಾ ಶೆಟ್ಟಿ, ಬೀಟ್ ಪೊಲೀಸ್ ಸಿಬ್ಬಂದಿ ಅಶೋಕ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.