ADVERTISEMENT

ಉಡುಪಿ| ತೆಂಕು, ಬಡಗು ಕಲಾವಿದರ ಆನ್‌ಲೈನ್‌ ಯಕ್ಷಗಾನ

ಕಲಾವಿದ ನೀಲ್ಕೋಡು ಶಂಕರ ಹೆಗಡೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 14:03 IST
Last Updated 22 ಜುಲೈ 2020, 14:03 IST
ಯಕ್ಷಗಾನದ ದೃಶ್ಯ
ಯಕ್ಷಗಾನದ ದೃಶ್ಯ   

ಹಿರಿಯಡಕ: ಕೊರೊನಾ ವೈರಸ್ ಸೋಂಕು ತಡೆ ನಿರ್ಬಂಧಗಳಿಂದಾಗಿ ಯಕ್ಷಗಾನ ಪ್ರದರ್ಶನ ಮಾರ್ಚ್ ತಿಂಗಳಿನಿಂದ ನಡೆಯದಿರುವುದರಿಂದ ಯಕ್ಷಗಾನ ವೃತ್ತಿನಿರತ ಕಲಾವಿದರು ಸಂಕಷ್ಟ, ಕಲಾಭಿಮಾನಿಗಳ ಬೇಸರ ನಿವಾರಿಸಲು ಹೊಸ ಪ್ರಯತ್ನಕ್ಕೆಕಲಾವಿದರೊಬ್ಬರು ಕೈಹಾಕಿದ್ದಾರೆ.

ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ವೇಷಧಾರಿ ನೀಲ್ಕೋಡು ಶಂಕರ ಹೆಗಡೆ ಅವರು ತೆಂಕು, ಬಡಗು ತಿಟ್ಟುಗಳ ಸಂಯೋಜನೆಯ 'ಸುದರ್ಶನ ವಿಜಯ' ಪ್ರಸಂಗದ ಯಕ್ಷಗಾನ ಪ್ರದರ್ಶನವನ್ನು ಅಂತರ್ಜಾಲದಲ್ಲಿ ವಿಶ್ವದಾದ್ಯಂತ ಇರುವ ಯಕ್ಷಗಾನ ಪ್ರೇಮಿಗಳು ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.

ಹಿಮ್ಮೇಳದಲ್ಲಿ ಬಡಗುತಿಟ್ಟಿನ ಹಿಮ್ಮೇಳದಲ್ಲಿ ಶಂಕರ್ ಭಟ್ ಬ್ರಹ್ಮೂರು, ಸುನಿಲ್ ಭಂಡಾರಿ, ಪ್ರಸನ್ನ ಭಟ್ ಹೆಗ್ಗೋಡು ತೆಂಕು ತಿಟ್ಟಿನ ಹಿಮ್ನೇಳದಲ್ಲಿ ಕಾವ್ಯಶ್ರೀ ನಾಯಕ್, ಕೃಷ್ಣಪ್ರಕಾಶ್ ಉಳಿತ್ತಾಯ, ಶ್ರೀನಿವಾಸ ಪ್ರಭು, ಶ್ರೀಪತಿ ನಾಯಕ್ ಅಜೇರು , ಮುಮ್ಮೇಳದಲ್ಲಿ ವಾಸುದೇವ ರಂಗ ಭಟ್, ಪ್ರದೀಪ್ ಸಾಮಗ, ನೀಲ್ಕೋಡು ಶಂಕರ ಹೆಗಡೆ, ಅಣ್ಣಪ್ಪ ಮಾಗೋಡು, ನಾಗೇಂದ್ರ ಮೂರೂರು ಅವರು ಕಲಾವಿದರಾಗಿ ಭಾಗವಹಿಸಿದ್ದಾರೆ.

ADVERTISEMENT

ಪ್ರಥಮ ಪ್ರದರ್ಶನಕ್ಕೆ ಯಕ್ಷಾಭಿಮಾನಿಗಳಿಂದ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಅಗಸ್ಟ್ 15 ರಿಂದ ಮತ್ತೊಂದು ಅಂತರ್ಜಾಲ ಪ್ರದರ್ಶನವನ್ನು ಆಯೋಜಿಸುವ ಚಿಂತನೆ ಹೆಗಡೆ ಹೊಂದಿದ್ದಾರೆ.

ಕೋವಿಡ್‌ ನಿರ್ಬಂಧದಿಂದಾಗಿ ಯಕ್ಷಗಾನ ಪ್ರದರ್ಶನ ಸ್ಥಗಿತವಾಗಿದೆ. ಮೇಳಗಳು ಅವಧಿಗೆ ಮುನ್ನವೇ ಪ್ರದರ್ಶನ ನಿಲ್ಲಿಸಿವೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರದಿಂದ ಒಂದಿಷ್ಟು ನೆರವು ಸಿಕ್ಕಿದ್ದರೂ ಕಲೆಯನ್ನೇ ಜೀವವಾಗಿಸಿಕೊಂಡ ಅವರಿಗೆ ಯಕ್ಷಗಾನ ವೇಷ‌ ತೊಟ್ಟು ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಪ್ರದರ್ಶನ‌ ನೀಡಲು ಅವಕಾಶ ಇಲ್ಲ ಎಂಬುದು ಬೇಸರ ಉಂಟುಮಾಡಿತ್ತು. ಸಾವಿರಾರು ಕಲಾವಿದರೊಂದಿಗೆ ಲಕ್ಷಾಂತರ ಪ್ರೇಕ್ಷಕರು ಕೂಡ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಲಾವಿದರಿಗೂ ನೆರವು ಹಾಗೂ ಯಕ್ಷಪ್ರೇಮಿಗಳಿಗೂ ಮನರಂಜನೆ ನೀಡುವ ದೃಷ್ಟಿಯಲ್ಲಿ ನೀಲ್ಕೋಡು ಶಂಕರ ಹೆಗಡೆ ಅವರ ಈ ವಿನೂತನ ಅಂತರ್ಜಾಲ ಯಕ್ಷಗಾನ ಪ್ರದರ್ಶನ ಎಲ್ಲರ ಮೆಚ್ಚುಗೆ ಗಳಿಸಿದೆ.

‘ಕಲಾವಿದರ ನೆರವಿಗೆ ಶುಲ್ಕ’: ನೀಲ್ಕೋಡು ಶಂಕರ ಹೆಗಡೆ ತಮ್ಮ ‘ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡು’ ಸಂಸ್ಥೆಯ ಮೂಲಕ ವಿನಾಯಕ ಭಟ್ ಅಂತ್ರಳ್ಳಿ ಇವರ ಸಂಯೋಜನೆಯಲ್ಲಿ ತೆಂಕು-ಬಡಗುತಿಟ್ಟಿನ ಹೆಸರಾಂತ ಹಿಮ್ಮೇಳ-ಮುಮ್ಮೇಳ ಕಲಾವಿದರನ್ನು ಒಗ್ಗೂಡಿಸಿ ಈ ಪ್ರಯತ್ನ ಮಾಡಿದ್ದಾರೆ. http://live.shaale.com/sudarshanavijaya ಎಂಬ ಲಿಂಕ್ ಮೂಲಕ ವೀಕ್ಷಿಸಬಹುದು. ಮೂಲಕ ಒಂದು ಬಾರಿ ₹ 130 ಪಾವತಿಸಿದಲ್ಲಿ ಜುಲೈ 12 ರಿಂದ ಅಗಸ್ಟ್ 14 ರವರೆಗೆ ಈ ಯಕ್ಷಗಾನ ಪ್ರದರ್ಶನವನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದಾಗಿದೆ. ಕಲಾವಿದರಿಗೆ ನೆರವಾಗುವ ದೃಷ್ಟಿಯಿಂದ ಈ ವಿನೂತನ ಪ್ರಯತ್ನ ಮಾಡಲಾಗಿದೆ. ನಿಗದಿತ ಶುಲ್ಕ ಕಲಾವಿದರು ಹಾಗೂ ವೇಷಭೂಷಣದ ಸಹಾಯಧನವಾಗಿದೆ‌. ಅಭಿಮಾನಿಗಳಿಂದ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನೀಲ್ಕೋಡು ಶಂಕರ ಹೆಗಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.