ADVERTISEMENT

ಉಡುಪಿ: ಮಕ್ಕಳನ್ನು ಕಾಡುತ್ತಿರುವ ಕೋವಿಡ್‌

ಮಕ್ಕಳ ಆಸ್ಪತ್ರೆಗಳು ಫುಲ್‌; ಸಾಮಾನ್ಯ ಕಾಯಿಲೆಯೋ, ಕೊರೊನಾ ಸೋಂಕೋ: ಗೊಂದಲದಲ್ಲಿ ಪೋಷಕರು

ಬಾಲಚಂದ್ರ ಎಚ್.
Published 23 ಜನವರಿ 2022, 19:30 IST
Last Updated 23 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಕೋವಿಡ್–19 ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂಬ ತಜ್ಞರ ಎಚ್ಚರಿಕೆಯಂತೆಯೇ ಜಿಲ್ಲೆಯಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜ.1ರಿಂದ 22ರವರೆಗೆ ಜಿಲ್ಲೆಯಲ್ಲಿ 8,429 ಜನರಲ್ಲಿ ಕೋವಿಡ್‌ ದೃಢಪಟ್ಟಿದ್ದು, ಇವರಲ್ಲಿ 3,351 ಮಂದಿ 20 ವರ್ಷದೊಳಗಿನವರು.

ಎಳೆಯ ಮಕ್ಕಳಲ್ಲಿ ಕಡಿಮೆ:

ಒಟ್ಟು ಸೋಂಕಿತರ ಪೈಕಿ 5 ವರ್ಷದೊಳಗಿರುವ 77 ಮಕ್ಕಳಲ್ಲಿ ಮಾತ್ರ ಸೋಂಕು ಪತ್ತೆಯಾಗಿದ್ದು, ಎಳೆಯ ಮಕ್ಕಳ ಮೇಲೆ ಕೋವಿಡ್‌ ಗಂಭೀರ ಪರಿಣಾಮ ಬೀರದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇನ್ನು 6ರಿಂದ 10 ವರ್ಷದೊಳಗಿರುವ 388, 11ರಿಂದ 15 ವರ್ಷದೊಳಗಿನ 1,269, 16ರಿಂದ 20 ವರ್ಷದೊಳಗಿನ 1,599 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಅಂಕಿ ಅಂಶಗಳನ್ನು ನೋಡಿದರೆ 16 ರಿಂದ 20 ವರ್ಷದೊಳಗಿರುವ ಪ್ರೌಢಾವಸ್ಯೆಯಲ್ಲಿರುವವರಿಗೆ ಸೋಂಕು ಹೆಚ್ಚಾಗಿ ಬಾಧಿಸುತ್ತಿರುವುದು ಕಂಡುಬರುತ್ತದೆ.

ADVERTISEMENT

ಮಕ್ಕಳ ಆಸ್ಪತ್ರೆಯಲ್ಲಿ ದಟ್ಟಣೆ:

ಮೂರನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಜಿಲ್ಲೆಯಾದ್ಯಂತ ಮಕ್ಕಳಿಗೆ ಶೀತ, ಕೆಮ್ಮು, ಜ್ವರ, ತಲೆನೋವು ಕಾಣಿಸಿಕೊಂಡಿದ್ದು, ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಮಕ್ಕಳನ್ನು ಬಾಧಿಸುತ್ತಿರುವುದು ಸಾಮಾನ್ಯ ಶೀತ, ಜ್ವರದ ಸಮಸ್ಯೆಯೇ ಅಥವಾ ಕೊರೊನಾ ಸೋಂಕೇ ಎಂಬ ಆತಂಕದಲ್ಲಿದ್ದಾರೆ ಪೋಷಕರು. ಮತ್ತೊಂದೆಡೆ, ಶಾಲಾ ಕಾಲೇಜುಗಳಲ್ಲಿಯೂ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದು ಭೀತಿ ಹುಟ್ಟಿಸಿದೆ.

ಶೀತ ವಾತಾವರಣ ಪ್ರಭಾವ:

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಚಳಿಯ ಪ್ರಮಾಣ ಹೆಚ್ಚಾಗಿದ್ದು, ವಾತಾವರಣದಲ್ಲಿನ ಬದಲಾವಣೆಯಿಂದ ಮಕ್ಕಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗಿದೆ. ಶೀತ, ಜ್ವರ, ಕೆಮ್ಮು, ತಲೆನೋವು ಕೋವಿಡ್ ಲಕ್ಷಣಗಳಾದರೂ ಕೋವಿಡ್ ಎಂದೇ ಭಾವಿಸಬೇಕಿಲ್ಲ. ಮಕ್ಕಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಡಮಾಡದೆ ಕೋವಿಡ್ ಪರೀಕ್ಷೆ ಮಾಡಿಸಬೇಕು.

ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದರೆ ಆತಂಕಪಡದೆ ಮಗುವನ್ನು ಮನೆಯಲ್ಲಿಯೇ ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಮೂಲಕ ಮನೆಯ ಇತರ ಸದಸ್ಯರಿಗೆ ಸೋಂಕು ಹರಡದಂತೆ ತಡೆಯಬಹುದು. ಮುಖ್ಯವಾಗಿ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿರುವ ವೃದ್ಧರಿಗೆ ಮಕ್ಕಳಿಂದ ಸೋಂಕು ತಗುಲುವುದನ್ನು ತಪ್ಪಿಸಬಹುದು ಎನ್ನುತ್ತಾರೆ ವೈದ್ಯರು.

ಮಕ್ಕಳಲ್ಲಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಪೋಷಕರು ಆತಂಕಪಡುವ ಅಗತ್ಯವಿಲ್ಲ. ಸೋಂಕಿತ ಮಕ್ಕಳಿಗೆ ನಿಯಮಿತವಾಗಿ ಔಷಧ ನೀಡಿ ಆರೈಕೆ ಮಾಡಿದರೆ ಬೇಗ ಗುಣಮುಖರಾಗುತ್ತಾರೆ. ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್‌ನಿಂದ ಯಾವ ಮಗುವಿನ ಜೀವಕ್ಕೂ ಹಾನಿಯಾಗಿಲ್ಲ ಎಂದು ಡಿಎಚ್‌ಒ ಡಾ.ನಾಗಭೂಷಣ ಉಡುಪ ತಿಳಿಸಿದರು.

ಕೋವಿಡ್ ಮೂರನೇ ಅಲೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಎರಡನೇ ಅಲೆಯ ಮಧ್ಯಭಾಗದಲ್ಲಿಯೇ ಜಿಲ್ಲೆಯಾದ್ಯಂತ ‘ವಾತ್ಯಲ್ಯ’ ಕಾರ್ಯಕ್ರಮದಡಿ 1.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಗುರುತಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರ ಒದಗಿಸಲಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಸೋಂಕು ಗಂಭೀರ ಪರಿಣಾಮ ಬೀರದಂತೆ ತಡೆಯಲು ಸಾಧ್ಯವಾಗಿದೆ ಎನ್ನುತ್ತಾರೆ ಡಿಎಚ್‌ಒ.

ಮಕ್ಕಳಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಸಜ್ಜಾಗಿದೆ. ಕುಂದಾಪುರದಲ್ಲಿ 22, ಕಾರ್ಕಳ 10 ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ 18 ಪಿಡಿಯಾಟ್ರಿಕ್ ಐಸಿಯು ಬೆಡ್‌ಗಳನ್ನು ಮಕ್ಕಳಿಗೆ ಮೀಸರಿಸಲಾಗಿದೆ. ಪಿಎಚ್‌ಸಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗಿದೆ.

ಸರ್ಕಾರಿ ಮಕ್ಕಳ ವೈದ್ಯರ ಜತೆ ಖಾಸಗಿ ಆಸ್ಪತ್ರೆಯ ಮಕ್ಕಳ ವೈದ್ಯರ ಸೇವೆಯನ್ನು ವಾರಕ್ಕೆ ಮೂರು ದಿನ ಬಳಸಿಕೊಳ್ಳಲಾಗುವುದು. ಜತೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲು ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರ, ಶುಶ್ರೂಷಕರನ್ನೊಳಗೊಂಡ 15 ತಂಡಗಳನ್ನು ರಚಿಸಲಾಗಿದ್ದು, ಪಿಡಿಯಾಟ್ರಿಕ್‌ ಐಸಿಯು ನಿರ್ವಹಣೆ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ವಿವರ ನೀಡಿದರು.

ಮಕ್ಕಳಲ್ಲಿ ಸೋಂಕು ಹೆಚ್ಚಾದರೆ, ಟೆಲಿ ಕೌನ್ಸಿಲಿಂಗ್ ಮೂಲಕ ವೈದ್ಯಕೀಯ ನೆರವು ನೀಡಲು ಆಯುರ್ವೇದ ವೈದ್ಯರು, ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು ಹಾಗೂ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳನ್ನೊಳಗೊಂಡ 69 ತಂಡಗಳನ್ನು ರಚಿಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಒಂದೊಂದು ತಂಡವನ್ನು ಲಿಂಕ್ ಮಾಡಲಾಗಿದೆ ಎಂದು ಡಿಎಚ್‌ಒ ಡಾ.ನಾಗಭೂಷಣ ಉಡುಪ ಮಾಹಿತಿ ನೀಡಿದರು.

ಏರುಗತಿಯಲ್ಲಿ ಕೋವಿಡ್‌

ಡಿಸೆಂಬರ್‌ನಲ್ಲಿ ಪತ್ತೆಯಾದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ ಕೇವಲ 240. ಹೊಸ ವರ್ಷಾರಂಭದಿಂದ ಸೋಂಕು ಏರುಗತಿಯಲ್ಲಿದ್ದು, ಗರಿಷ್ಠ ಮಟ್ಟದತ್ತ ಸಾಗುತ್ತಿದೆ. ಡಿಸೆಂಬರ್‌ನಲ್ಲಿ ದಿನವೊಂದಕ್ಕೆ ಸರಾಸರಿ 8 ಮಂದಿಯಲ್ಲಿ ಸೋಂಕು ಪತ್ತೆಯಾದರೆ, ಜನವರಿಯಲ್ಲಿ ದಿನವೊಂದಕ್ಕೆ ಸರಾಸರಿ 383 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಕಳೆದ ತಿಂಗಳು ಶೇ 1ರ ಆಸುಪಾಸಿನಲ್ಲಿದ್ದ ಪಾಸಿಟಿವಿಟಿ ದರ (ಜ.22ರವರೆಗೆ) ಸದ್ಯ ಶೇ 14.67ಕ್ಕೆ ತಲುಪಿದೆ. ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದ್ದರೂ, ನಿಧಾನಗತಿಯಲ್ಲಿ ಆಸ್ಪತ್ರೆ ಸೇರುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ

ಸದ್ಯ ಜಿಲ್ಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಹಾಸಿಗೆಗಳು ಲಭ್ಯವಿದ್ದು, ಸಾಮಾನ್ಯ ಹಾಸಿಗೆಯಲ್ಲಿ 97, ಎಚ್‌ಡಿಯುನಲ್ಲಿ 24, ಐಸಿಯುನಲ್ಲಿ 18, ವೆಂಟಿಲೇಟರ್ ಸೌಲಭ್ಯವಿರುವ ಐಸಿಯು ಬೆಡ್‌ಗಳಲ್ಲಿ 11 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 5,838 ಸೋಂಕಿತರು ಹೋಂ ಐಸೊಲೇಷನ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.