ADVERTISEMENT

53 ದಿನಗಳ ಬಳಿಕ ಕೋವಿಡ್‌ನಿಂದ ಸಾವು

ಉಡುಪಿ: ಮೃತ ಸೋಂಕಿತರ ಸಂಖ್ಯೆ 190ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 15:53 IST
Last Updated 25 ಫೆಬ್ರುವರಿ 2021, 15:53 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ, ಕಿಡ್ನಿ ವೈಪಲ್ಯ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ಉಡುಪಿ ತಾಲ್ಲೂಕಿನ 67 ವರ್ಷದ ವ್ಯಕ್ತಿ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಫೆ.19ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

53 ದಿನಗಳ ಬಳಿಕ ಸಾವು:

ADVERTISEMENT

ಜಿಲ್ಲೆಯಲ್ಲಿ ಜ.2ರಂದು ಕೋವಿಡ್‌ನಿಂದ ಸಾವು ಸಂಭವಿಸಿತ್ತು. ಇದಾದ 53 ದಿನಗಳ ಬಳಿಕ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಡಿ.18ರಂದು ಕಾರ್ಕಳದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.

190ಕ್ಕೇರಿದ ಮೃತರ ಸಂಖ್ಯೆ:

ಜನವರಿಯಿಂದೀಚೆಗೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದ್ದು, ಮೃತರ ಸಂಖ್ಯೆಯೂ ಕಡಿಮೆಯಾಗಿತ್ತು. ಇದೀಗ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವ ಸಂದರ್ಭ ಜಿಲ್ಲೆಯಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಿದೆ. ಸೋಂಕಿನಿಂದ ಮೃತರಾದವರ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.

12 ಮಂದಿಗೆ ಕೋವಿಡ್‌:

ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಉಡುಪಿಯ 7, ಕುಂದಾಪುರದ ಒಬ್ಬರು, ಕಾರ್ಕಳದ ಮೂವರಲ್ಲಿಹಾಗೂ ಬೇರೆ ಜಿಲ್ಲೆಯ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ 7 ಪುರುಷರು, ಐವರು ಮಹಿಳೆಯರು ಇದ್ದಾರೆ. 8 ಮಂದಿ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾಲ್ವರು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಒಟ್ಟು 63 ಸಕ್ರಿಯ ಸೋಂಕಿತರು ಇದ್ದಾರೆ. ಗುರುವಾರ 11 ಮಂದಿ ಸೇರಿ ಇದುವರೆಗೂ 23,316 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3,63,519 ಮಂದಿಗೆ ಕೋವಿಡ್‌ ಪರೀಕ್ಷೆಗೊಳಪಡಿಸಲಾಗಿದ್ದು, 3,39,950 ವರದಿಗಳು ನೆಗೆಟಿವ್‌, 23,569 ಪಾಸಿಟವ್ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.