ADVERTISEMENT

ಮನರಂಜನೆ ಜತೆಗೆ ಮೂಲಸಂಸ್ಕೃತಿಯ ಪಾಠ

ಸುಮನಸಾ ಕೊಡವೂರು ಸಂಸ್ಥೆ ಆಶ್ರಯದಲ್ಲಿ ‘ಕೆಸರ್ಡೇರ್‌ ಬಿರ್ಸೆರ್’ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 14:38 IST
Last Updated 11 ಜುಲೈ 2019, 14:38 IST
ಸುಮನಸಾ ಕೊಡವೂರು ಸಂಸ್ಥೆ ಆಶ್ರಯದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕೊಡುವೂರು ಸಂಕದ ಬಳಿಯ ಗದ್ದೆಯಲ್ಲಿ ಈಚೆಗೆ ಐದನೇ ವರ್ಷದ ‘ಕೆಸರ್ಡೇರ್‌ ಬಿರ್ಸೆರ್’ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಸುಮನಸಾ ಕೊಡವೂರು ಸಂಸ್ಥೆ ಆಶ್ರಯದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕೊಡುವೂರು ಸಂಕದ ಬಳಿಯ ಗದ್ದೆಯಲ್ಲಿ ಈಚೆಗೆ ಐದನೇ ವರ್ಷದ ‘ಕೆಸರ್ಡೇರ್‌ ಬಿರ್ಸೆರ್’ ಗ್ರಾಮೀಣ ಕ್ರೀಡಾಕೂಟ ನಡೆಯಿತು.   

ಉಡುಪಿ: ಸುಮನಸಾ ಕೊಡವೂರು ಸಂಸ್ಥೆ ಆಶ್ರಯದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕೊಡುವೂರು ಸಂಕದ ಬಳಿಯ ಗದ್ದೆಯಲ್ಲಿ ಈಚೆಗೆ ಐದನೇ ವರ್ಷದ ‘ಕೆಸರ್ಡೇರ್‌ ಬಿರ್ಸೆರ್’ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಮಳೆಯ ಕಣ್ಣು ಮುಚ್ಚಾಲೆಯ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು, ಯುವಜನತೆ ಪಾಲ್ಕೊಂಡು ಸಂಭ್ರಮಿಸಿದರು.ಕೆಸರಿನಲ್ಲಿ ಬಿದ್ದು ಖುಷಿಪಟ್ಟರು.

ಪ್ರಚಲಿತ ವೈವಿಧ್ಯಮಯ ಆಕರ್ಷಣೆಗಳ ನಡುವೆ, ಅಂದಿನ ದಿನಮಾನದ ಅನ್ಯೋನ್ಯತೆ ಮತ್ತು ಸೌಹಾರ್ದತೆಯ ಸಾಕ್ಷಿಯಂತಿದ್ದ ಆಟೋಟಗಳು ಕಣ್ಮರೆಯಾಗಿವೆ. ಅವುಗಳನ್ನುಮತ್ತೆಪರಿಚಯಿಸುವ ಹಾಗೂ ಆಟೋಟಗಳನ್ನು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.

ADVERTISEMENT

ಮನೋರಂಜನೆಯ ಜತೆಗೆ, ಜೀವನಕ್ರಮದ ಸೂಕ್ಷ್ಮತೆಯನ್ನು ನವಪೀಳಿಗೆಗೆ ತಿಳಿಸುವುದು. ಕೃಷಿ ಪ್ರಧಾನವಾದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯವಿದೆ ಎಂಬುದನ್ನು ತಿಳಿಸುವುದು ‘ಕೆಸರ್ಡೇರ್ ಬಿರ್ಸೆರ್’ ಕಾರ್ಯಕ್ರಮದ ಉದ್ದೇಶ ಎಂದರು.

ನಾನಾ ಕಾರಣಗಳಿಂದ ಪ್ರಕೃತಿ ಮೇಲಿನ ದಾಳಿ ಮಿತಿ ಮೀರುತ್ತಿದೆ. ಪವಿತ್ರವಾದ ಮಣ್ಣು ಮಾಲಿನ್ಯಗೊಳ್ಳುತ್ತಿದೆ. ಈ ಆತಂಕಕಾರಿ ಬೆಳವಣಿಗೆಗೆ ಜಾಗೃತಿಯ ಸಂಕೇತವಾಗಿ ಭೂರಮೆಗೆ ಕ್ಷೀರಧಾರೆ ಎರೆದು ಕಾರ್ಯಕ್ರಮ ಉದ್ಘಾಟಿಸಲಾಯಿತು.

ಅತಿಥಿಗಳಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಗರಸಭಾ ಸದಸ್ಯ ವಿಜಯ ಕೊಡವೂರು, ಕಲ್ಯಾಣಪುರ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣ ದೇವಾಡಿಗ, ಉದ್ಯಮಿ ಮಧುಸೂಧನ್ ಪೈ, ಪತ್ರಕರ್ತ ಜನಾರ್ಧನ ಕೊಡವೂರು, ಪ್ರಗತಿಪರ ಕೃಷಿಕ ಸದಾನಂದ ಶೇರಿಗಾರ್, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಗೌರವಾಧ್ಯಕ್ಷ ಎಂ.ಎಸ್ ಭಟ್, ಸಂಚಾಲಕ ಭಾಸ್ಕರ ಪಾಲನ್,ಕ್ರೀಡಾ ಕಾರ್ಯದರ್ಶಿ ಹರೀಶ್ ಕಲ್ಯಾಣಪುರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅತಿಥಿಗಣ್ಯರನ್ನು ಮುಟ್ಟಾಳೆ, ಗೆಂದಾಳೆಯ ಸೀಯಾಳ ಮತ್ತು ವಾಲೆಬೆಲ್ಲದೊಂದಿಗೆ ಸಾಂಪ್ರದಾಯಿಕವಾಗಿ ಸತ್ಕರಿಸಲಾಯಿತು. ಕೆಸರುಗದ್ದೆಗೆ ಪೂರಕವಾಗಿ ಓಟ, ಹಿಮ್ಮಖ ಓಟ, ಸಂಯಾಮಿ ಓಟ, ಹಾಳೆ ಎಳೆಯುವುದು, ಕಪ್ಪೆ ಓಟ, ಉಪ್ಪಿನ ಮೂಟೆ, ಈಜುವುದು, ಕೆರೆ–ದಡ, ರಿಂಗ್ ಓಟ, ಲಗೋರಿ,ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಬೆರಿಚೆಂಡ್, ಮಡಕೆ ಒಡೆಯುವುದು, ಹಗ್ಗಜಗ್ಗಾಟ ಸೇರಿದಂತೆ 20 ಬಗೆಯ ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು.

ತುಳುನಾಡ ಶೈಲಿಯ ಗಂಜಿ, ಹುರುಳಿ ಚಟ್ನಿ, ಮಳಿವೆ ಸುಕ್ಕದ ಉಟೋಪಚಾರವಿತ್ತು. ವಿಜೇತರಿಗೆ ಹೂಗಿಡಗಳನ್ನು ಬಹುಮಾನವಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.