ADVERTISEMENT

ಉಡುಪಿ ಜನರ ಪ್ರೀತಿ ಮರೆಯಲಾರೆ: ನಿರ್ಗಮಿತ ಜಿಲ್ಲಾಧಿಕಾರಿ ಜಿ.ಜಗದೀಶ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 18:46 IST
Last Updated 31 ಆಗಸ್ಟ್ 2021, 18:46 IST
ಮಂಗಳವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ದಂಪತಿಗೆ ಸನ್ಮಾನಿಸಲಾಯಿತು.
ಮಂಗಳವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ದಂಪತಿಗೆ ಸನ್ಮಾನಿಸಲಾಯಿತು.   

ಉಡುಪಿ: ಉಡುಪಿ ಜನರು ತೋರಿರುವ ಅಭಿಮಾನ, ಪ್ರೀತಿ ಮರೆಯಲು ಸಾಧ್ಯವಿಲ್ಲ. ಇಲ್ಲಿಯ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಹುದ್ದೆಗೆ ಹೋಗಲು ಸಾಧ್ಯವಾಗಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ಕೃತಜ್ಞತೆ ಸಲ್ಲಿಸಿದರು.

ಮಂಗಳವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅವಧಿಯ ಹೆಚ್ಚಿನ ಸಮಯ ಕೋವಿಡ್‌ ನಿಯಂತ್ರಣದಲ್ಲಿ ಕಳೆಯುವಂತಾಯಿತು. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗಲಿಲ್ಲ ಎಂಬ ಕೊರಗಿದೆ. ಕೊರಗಿನ ನಡುವೆಯೂ ಕೋವಿಡ್‌ನಿಂದ ಜಿಲ್ಲೆಯಲ್ಲಿ ಹೆಚ್ಚು ಸಾವುಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಗ್ಗೆ ಸಮಾಧಾನ ಇದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃಧ್ದಿ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದು, ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಂದಾಯ ಸೇವೆಗಳನ್ನು ಒದಗಿಸುವಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಸಂಸದರು ಮತ್ತು ಶಾಸಕರ ಪ್ರದೇಶಾಭಿವೃಧ್ದಿ ಅನುದಾನ ಬಳಿಸಿಕೊಂಡು ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿಯೂ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ,ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.

ADVERTISEMENT

ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಮರಳು ಸಮಸ್ಯೆಯನ್ನು ಅಧಿಕಾರ ಸ್ವೀಕರಿಸಿದ ಒಂದೂವರೆ ತಿಂಗಳಿನಲ್ಲಿಯೇ ಕಾನೂನು ಚೌಕಟ್ಟಿನೊಳಗೆ ನಿಯಮಾವಳಿ ರೂಪಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪರಿಹಾರ ಮಾಡಿದರು. ಕೋವಿಡ್ ಸಮಸ್ಯೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಲಾಕ್‌ಡೌನ್ ಅನುಷ್ಠಾನ, ಕ್ವಾರಂಟೈನ್ ನಿರ್ವಹಣೆ, ಜಿಲ್ಲೆಗೆ ಆಮ್ಲಜನಕ ಪೂರೈಕೆ ಹಾಗೂ ಬೆಡ್‌ಗಳ ಕೊರತೆಯಾಗದಂತೆ ಕ್ರಮ ಕೈಗೊಂಡರು. ಜನಪ್ರತಿನಿಧಿಗಳಿಗೆ ಉತ್ತಮ ಸಹಕಾರ ನೀಡಿದರು ಎಂದರು.

ಜಿಲ್ಲಾಧಿಕಾರಿ ಪತ್ನಿ ಸೌಮ್ಯ, ಮಕ್ಕಳಾದ ಅನುಷ್ಕಾ ಹಾಗೂ ಅಭಿಘ್ನ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಕಾವಲು ಪಡೆ ಎಸ್‌ಪಿ ನಿಖಿಲ್, ಕುಂದಾಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

ವಿವಿಧ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗಿನ ಕಾರ್ಯ ನಿರ್ವಹಣೆಯ ಅನುಭವಗಳನ್ನು ಹಂಚಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.