ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರ ಅನರ್ಹತೆ; ಶೂನ್ಯ ವೇಳೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 13:34 IST
Last Updated 11 ಜುಲೈ 2023, 13:34 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಕುಂದಾಪುರ: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಆಯ್ಕೆಯಾದ 3 ತಿಂಗಳ ಒಳಗೆ ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನು ಸಲ್ಲಿಸದೇ ಇದ್ದರೆ ಸದಸ್ಯತ್ವ ಅನರ್ಹಗೊಳಿಸಲಾಗುವುದು ಎಂದು ಉಚ್ಛ ನ್ಯಾಯಾಲಯ ಮತ್ತು ಸರ್ಕಾರ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ, ಅವರನ್ನು ಕೂಡಲೇ ಸದಸ್ಯ ಸ್ಥಾನದಿಂದ ತೆಗೆದು ಹಾಕದಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.

ಉಚ್ಛ ನ್ಯಾಯಾಲಯ ಮತ್ತು ಸರ್ಕಾರ ಅಭಿಪ್ರಾಯದ ಕುರಿತಂತೆ ವಿಧಾನಪರಿಷತ್‌ನ ಕಲಾಪದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಗ್ರಾಮ ಪಂಚಾಯತಿಯ ಸದಸ್ಯರಲ್ಲಿ ಶೇ 50ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದಿಂದ ಬಂದವರಾಗಿದ್ದು, ಆಸ್ತಿ ವಿವರ ಸಲ್ಲಿಸುವ ಪ್ರಕ್ರಿಯೆ ಹಾಗೂ ರೀತಿ-ನೀತಿಗಳ ಬಗ್ಗೆ ಎಲ್ಲರಿಗೂ ಸಂಪೂರ್ಣ ಮಾಹಿತಿ ಇಲ್ಲದೆ ಇರುವುದರಿಂದಾಗಿ, ಈ ವಿಚಾರಕ್ಕೆ ಕೂಡಲೇ ಅವರ ಸದಸ್ಯ ಸ್ಥಾನದಿಂದ ತೆಗೆದು ಹಾಕದಂತೆ ಸರ್ಕಾರವನ್ನು ಅವರು ಒತ್ತಾಯಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಪ್ರಕರಣ ‘43-ಬಿ’ ಯಲ್ಲಿ ತಿಳಿಸಿದಂತೆ, ಗ್ರಾಮ ಪಂಚಾಯಿತಿ ಸದಸ್ಯರ ಚರ ಮತ್ತು ಸ್ಥಿರ ಆಸ್ತಿ ₹2 ಲಕ್ಷ ಮೀರಿದರೆ ಮಾತ್ರ ಈ ಕ್ರಮ ಅನ್ವಯವಾಗುತ್ತದೆ. ಪ್ರತಿ ಆರ್ಥಿಕ ವರ್ಷದ ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾವ ಸದಸ್ಯ ಆಸ್ತಿ ಘೋಷಣೆಯನ್ನು ಮಾಡಿಲ್ಲವೋ ಆ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತಂದು ಚುನಾವಣಾ ಆಯುಕ್ತರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಅವರ ಅಹವಾಲನ್ನು ಹೇಳಿಕೊಂಡ ನಂತರ ಕಾರಣಗಳಿದ್ದರೆ ಮಾತ್ರ, ಗ್ರಾಮ ಪಂಚಾಯಿತಿ ಸದಸ್ಯರು ಆಸ್ತಿ ಘೋಷಣೆ ಮಾಡಿಲ್ಲವೆಂದು ತೆಗೆದು ಹಾಕಬಹುದು ಎನ್ನುವ ವಿಚಾರವನ್ನು ಸದನದ ಮುಂದಿಟ್ಟ ಅವರು, ಸುಖ-ಸುಮ್ಮನೆ ಸಮಂಜಸ ಕಾರಣಗಳಿಲ್ಲದೆ 3 ತಿಂಗಳೊಳಗೆ ಆಸ್ತಿ ಘೋಷಣೆ ಮಾಡಿಲ್ಲವೆಂಬ ಅಭಿಪ್ರಾಯದ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಸದಸ್ಯತ್ವ ಸ್ಥಾನದಿಂದ ಅನರ್ಹತೆ ಮಾಡುವುದು ಕಾಯ್ದೆಯ ಉಲ್ಲಂಘನೆ ಆಗುತ್ತದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.