ADVERTISEMENT

ಉಡುಪಿ: ಹಣಕಾಸು ವೈಷಮ್ಯ ಅಜೇಂದ್ರ ಶೆಟ್ಟಿ ಬರ್ಬರ ಕೊಲೆಗೆ ಕಾರಣವಾಯಿತೇ?

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 13:10 IST
Last Updated 31 ಜುಲೈ 2021, 13:10 IST
ಅಜೇಂದ್ರ ಶೆಟ್ಟಿ
ಅಜೇಂದ್ರ ಶೆಟ್ಟಿ    

ಕುಂದಾಪುರ:ಕೋಟೇಶ್ವರದ ಕಾಳಾವರ-ಅಸೋಡು ಎಂಬಲ್ಲಿ ಶುಕ್ರವಾರ ತಡರಾತ್ರಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಕಗಳು ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಮೃತ ವ್ಯಕ್ತಿ ತಾಲ್ಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಕೂಡಾಲು ನಿವಾಸಿ ಅಜೇಂದ್ರ ಶೆಟ್ಟಿ (33).

ಘಟನೆ ವಿವರ‌:ಅಸೋಡು-ಕಾಳಾವರದಲ್ಲಿ ಸ್ನೇಹಿತರ ಪಾಲುದಾರಿಕೆಯೊಂದಿಗೆ ಕೊಲೆಯಾದ ಅಜೇಂದ್ರ ಶೆಟ್ಟಿ ಡ್ರೀಮ್ ಫೈನಾನ್ಸ್ ನಡೆಸುತ್ತಿದ್ದರು. ಪ್ರತಿದಿನ ವ್ಯವಹಾರ ಮುಗಿಸಿ ರಾತ್ರಿ 10ರೊಳಗೆ ಮನೆ ಸೇರುತ್ತಿದ್ದ ಅಜೇಂದ್ರ ಶೆಟ್ಟಿ ಶುಕ್ರವಾರ ತಡರಾತ್ರಿಯಾದರೂ ಮನೆಗೆ ಬರಲಿಲ್ಲ. ಮನೆಯವರು ಮೊಬೈಲ್‍ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಲಿಲ್ಲ. ಅನುಮಾನಗೊಂಡ ಕುಟುಂಬದ ಸದಸ್ಯರು ಅಜೇಂದ್ರ ಶೆಟ್ಟಿ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ADVERTISEMENT

ಸ್ನೇಹಿತರು ತಡರಾತ್ರಿ ಅಜೇಂದ್ರ ಶೆಟ್ಟಿಯ ಫೈನಾನ್ಸ್ ಕಚೇರಿಗೆ ಹೋಗಿ ಪರಿಶೀಲಿಸಿದಾಗ ಸೋಫಾದ ಮೇಲೆ ಅಜೇಂದ್ರ ಶೆಟ್ಟಿ ರಕ್ತದ ಮಡುವಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸಹೋದರ ಮಹೇಂದ್ರ ಅವರಿಗೆ ಕರೆಮಾಡಿ ವಿಷಯ ತಿಳಿಸಿದ ಸ್ನೇಹಿತರು, ಅಜೇಂದ್ರರನ್ನು ಕೋಟೇಶ್ವರದ ಎನ್‍ಆರ್ ಆಚಾರ್ಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಫೈನಾನ್ಸ್ ಪಾಲುದಾರ ಅನೂಪ್ ಮೇಲೆ ಅನುಮಾನ ಇರುವುದಾಗಿ ಮೃತ ಅಜೇಂದ್ರನ ಸಹೋದರ ಮಹೇಂದ್ರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಅನೂಪ್‌ನೊಂದಿಗಿನ ಪೈನಾನ್ಸ್ ವ್ಯವಹಾರದಲ್ಲಿ ತಕರಾರು ಎದ್ದಿರುವ ಬಗ್ಗೆ ಅಜೇಂದ್ರ ಶೆಟ್ಟಿ ಹೇಳಿಕೊಂಡಿದ್ದ. ಜತೆಗೆ ಅಜೇಂದ್ರನ ಕಾರು ಹಾಗೂ ಚಿನ್ನದ ಸರ ಕೂಡ ನಾಪತ್ತೆಯಾಗಿರುವುದು ಅನೂಪ್‌ ಮೇಲಿನ ಅನುಮಾನ ಹೆಚ್ಚಾಗುವಂತೆ ಮಾಡಿದೆ’ ಎಂದು ಮಹೇಂದ್ರ ಶೆಟ್ಟಿ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

ಕೊಲೆ ನಡೆದ ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್ಪಿ ಕೆ.ಶ್ರೀಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ಹಾಗೂ ವಿಧಿ ವಿಜ್ಞಾನ ತಜ್ಞರು ಭೇಟಿನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕುಂದಾಪುರ ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಕಂಡ್ಲೂರು ಠಾಣಾಧಿಕಾರಿ ನಿರಂಜನ್ ಹಾಗೂ ತಂಡ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.