ADVERTISEMENT

ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿ

ಉಡುಪಿಯ 7 ಶಾಲೆಗಳಿಗೆ ಭೇಟಿನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 15:41 IST
Last Updated 8 ಅಕ್ಟೋಬರ್ 2021, 15:41 IST
ಶುಕ್ರವಾರ ವಳಕಾಡು ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿನೀಡಿ ಪರಿಶೀಲನೆ ನಡೆಸಿದರು.
ಶುಕ್ರವಾರ ವಳಕಾಡು ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿನೀಡಿ ಪರಿಶೀಲನೆ ನಡೆಸಿದರು.   

ಉಡುಪಿ: ಜಿಲ್ಲೆಯ ಸರ್ಕಾರಿ 7 ಶಾಲೆಗಳಿಗೆ ಭೇಟಿನೀಡಿದ್ದು, ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಎಸ್‌ಡಿಎಂಸಿ, ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿರುವುದು ಶ್ಲಾಘನೀಯ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಶುಕ್ರವಾರ ವಳಕಾಡು ಶಾಲೆಗೆ ಭೇಟಿನೀಡಿ ಪರಿಶೀಲನೆ ಬಳಿಕ ಮಾತನಾಡಿದ ಸಚಿವರು, ಸರ್ಕಾರದ ಅನುದಾನದ ಜತೆಗೆ ದಾನಿಗಳ ನೆರವಿನಿಂದ ಶಾಳೆಗಳನ್ನು ಅಭಿವೃದ್ಧಿಪಡಿಸಿರುವುದು ಉತ್ತಮ ಕಾರ್ಯ. ಕೆಲವ ಶಾಲೆಗಳು ಎಂಎನ್‌ಸಿ ಕಂಪೆನಿಗಳ ಮಾದರಿಯಲ್ಲಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ವಳಕಾಡು ಶಾಲೆಯಲ್ಲಿ ತರಗತಿಗೊಂದು ಗ್ರಂಥಾಲಯ ಆರಂಭಿಸಿರುವುದು ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಬಹುಶಃ ಇಂತಹ ಪ್ರಯತ್ನ ರಾಜ್ಯದಲ್ಲೇ ಮೊದಲು. ವಳಕಾಡು ಶಾಲೆಯಲ್ಲಿ ದಾಖಲಾತಿ ಪಡೆಯಬೇಕಾದರೆ ಜನಪ್ರತಿನಿಧಿಗಳಿಂದ ಶಿಫಾರಸು ಮಾಡಿಸಬೇಕು ಎಂಬ ವಿಚಾರ ತಿಳಿದು ಸಂತಸವಾಯಿತು ಎಂದರು.

ADVERTISEMENT

ಮುಂದಿನ ಶೈಕ್ಷಣಿಕ ವರ್ಷದಿಂದ ಎನ್‌ಇಪಿ:

ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಆಧರಿಸಿ ಶಾಲೆಗಳನ್ನು ಆರಂಭಿಸಲಾಗುವುದು. ಎನ್‌ಇಪಿ ಜಾರಿಗೆ ನಿವೃತ್ತ ಐಎಎಸ್‌ ಅಧಿಕಾರಿ ಮದನ್ ಗೋಪಾಲ್ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ರಚಿಸಲಾಗಿದ್ದು, ನಾಲ್ಕು ತಂಡಗಳಿಗೆ ನಾಲ್ವರು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಡಿ ಅಭಿರುಚಿಗೆ ತಕ್ಕಂತೆ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಮೀನುಗಾರಿಕೆ ಉದ್ಯಮ ನಡೆಸುವ ತಂತ್ರಗಾರಿಕೆ, ಉಪ್ಪು ನೀರನ್ನು ಸಿಹಿ ನೀರಾಗಿ ಬದಲಿಸುವ ತಂತ್ರಜ್ಞಾನವನ್ನೂ ಎನ್‌ಇಪಿಯಲ್ಲಿ ಕಲಿಯಬಹುದು. ಇಂಥದ್ದೇ ಕಲಿಯಬೇಕು ಎಂಬ ಚೌಕಟ್ಟು ಇಲ್ಲ, ಆಸಕ್ತಿ ಇರುವ ವಿಚಾರದಲ್ಲಿ ಕಲಿಯಬಹುದು ಎಂದರು.

ಕಳೆದ ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. ಸಿ ಅಂಡ್ ಆರ್ ನಿಯಮಾವಳಿ ಶಿಕ್ಷಕರ ನೇಮಕಾತಿಗೆ ಅಡ್ಡಿಯಾಗಿತ್ತು. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಟಿಇಟಿ ಹಾಗೂ ಸಿಇಟಿ ಪರೀಕ್ಷೆಯ ಮೂಲಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿರುವುದರಿಂದ ಪ್ರೌಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಆದರೆ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ ಎಂದರು.

ಪಠ್ಯ ಪರಿಷ್ಕರಣಾ ಸಮಿತಿಗೆ ರೋಹಿತ್ ಚಕ್ರತೀರ್ಥರನ್ನು ನೇಮಕ ಮಾಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಮಾಡುವುದೇ ವಿರೋಧ ಪಕ್ಷಗಳ ಕೆಲಸವಾಗಿಬಿಟ್ಟಿದೆ. ಕಾಂಗ್ರೆಸ್ ಪಕ್ಷ ಹೆಚ್ಚು ಕಾಲ ವಿರೋಧ ಪಕ್ಷದಲ್ಲಿರದ ಕಾರಣ ಯಾವ ವಿಚಾರಕ್ಕೆ ವಿರೋಧ ಮಾಡಬೇಕು ಎಂಬ ಅರಿವಿಲ್ಲ. ಒಳ್ಳೆಯ ಕೆಲಸಗಳಿಗೂ ವಿರೋಧ ಮಾಡುವುದು ಕಾಂಗ್ರೆಸ್‌ ಕೆಲಸವಾಗಿಬಿಟ್ಟಿದೆ ಎಂದು ಟೀಕಿಸಿದರು.

ಡಿಡಿಪಿಐ ಎನ್‌.ಎಚ್‌.ನಾಗೂರ, ಬಿಒಒ ನಾಗೇಂದ್ರಪ್ಪ, ಡಯಟ್ ಪ್ರಾಂಶುಪಾಲ ವೇದಮೂರ್ತಿ, ಬಿಆರ್‌ಸಿ ಉಮಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಭೂಷಣ್ ಶೇಟ್‌, ಎಸ್‌ಡಿಎಂಸಿ ಉಪಾಧ್ಯಕ್ಷ ಶ್ಯಾಂಪ್ರಸಾದ್ ಕುಡ್ವ, ಮುಖ್ಯೋಪಾಧ್ಯಾಯಿನಿ ಬಿ.ಕುಸಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.